ತುಮಕೂರು / ಬೆಳಗಾವಿ : ತುಮಕೂರು ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಿಢೀರ್ ದಾಳಿ ನಡೆಸಿದ್ದು, ಕಾಗದ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮನೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು, ಮನೆ ಹಾಗೂ ಫಾರಂ ಹೌಸ್ನಲ್ಲಿ ಮೊಕ್ಕಾಂ ಹೂಡಿದ್ದಾರೆ.
ತುಮಕೂರು ಕೃಷಿ ಇಲಾಖೆಯಲ್ಲಿ ಜೆಡಿ ಆಗಿ ಕೆಲಸ ನಿರ್ವಹಿಸುತ್ತಿರುವ ರವಿ ಇತ್ತೀಚೆಗಷ್ಟೇ ಹಾಸನದಿಂದ ತುಮಕೂರಿಗೆ ವರ್ಗಾವಣೆಯಾಗಿದ್ದರು. ನಗರದ ಶಂಕರಪುರದಲ್ಲಿ ಇರುವ ಅವರ ನಿವಾಸ ಹಾಗೂ ರಾಮನಗರದ ಫಾರಂ ಹೌಸ್ ಮೇಲೆ ದಾಳಿ ಮಾಡಲಾಗಿದೆ. ದಾಖಲಾತಿಗಳನ್ನು ಪರಿಶೀಲಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೊಂದೆಡೆ, ತುಮಕೂರಿನ ಶಿರಾ ತಾಲೂಕಿನ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪುಟ್ಟರಾಜು ಮನೆ ಮೇಲೆ ಸಹ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಶೋಕ ನಗರದ 9ನೇ ಕ್ರಾಸ್ನಲ್ಲಿರುವ ಮನೆ ಮತ್ತು ಯಲ್ಲಾಪುರದಲ್ಲಿರುವ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಲಾಗಿದೆ. ಇತ್ತೀಚಿಗಷ್ಟೇ ಇವರು ಭದ್ರಾವತಿಯಿಂದ ತುಮಕೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದರು.
ಇದನ್ನೂ ಓದಿ : NIA RAID: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ.. ದಕ್ಷಿಣಕನ್ನಡ, ಕೊಡಗು ಜಿಲ್ಲೆಗಳಲ್ಲಿ ಎನ್ಐಎ ದಾಳಿ
ಬೆಳಗಾವಿ ಜೆಸ್ಕಾಂ ಎಇಇ ಮನೆ ಮೇಲೆ ದಾಳಿ : ಇನ್ನು ಬೆಳಗಾವಿಯ ಜೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಮನೆ ಮೇಲೆ ಸಹ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ 5.30ರ ಸುಮಾರಿಗೆ ದಾಳಿ ನಡೆಸಿದರು. ಬೆಳಗಾವಿ ಜಿಲ್ಲೆಯ 3 ಕಡೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
ಇದನ್ನೂ ಓದಿ : ಬೆಂಗಳೂರು ಸೇರಿ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ.. ದಾಖಲೆಗಳ ಪರಿಶೀಲನೆ
ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ನಿವಾಸ ಮೇಲೆ ದಾಳಿ ಮಾಡಲಾಗಿದ್ದು, ಪ್ರಸ್ತುತ ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಬೆಳಗಾವಿಯ ರಾಮತೀರ್ಥನಗರದಲ್ಲಿರುವ ಶೇಖರ್ ಬಹುರೂಪಿ ನಿವಾಸ ಮತ್ತು ಸಹೋದರನ ನಿವಾಸ ಹಾಗೂ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿರುವ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಲೋಕಾಯುಕ್ತ ಡಿವೈಎಸ್ ಪಿ ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಲೋಕಾಯುಕ್ತ ದಾಳಿ ವೇಳೆ ನಕ್ಷತ್ರ ಆಮೆ ಪತ್ತೆ..
ಈ ಹಿಂದೆ ಹೆಸ್ಕಾಂ ಚಿಕ್ಕೋಡಿ ಉಪವಿಭಾಗದಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದ ಶೇಖರ್ ಬಹುರೂಪಿ 2019ರ ಪ್ರವಾಹ ಸಂದರ್ಭದಲ್ಲಿ ಪ್ರವಾಹ ಪರಿಹಾರ ಅನುಷ್ಠಾನದಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿದ್ದರು. 86 ಕೋಟಿ ರೂ. ಹಗರಣದ ಆರೋಪದಲ್ಲಿ ಐವರು ಎಇಇ ಸೇರಿ 20 ಸಿಬ್ಬಂದಿ ಅಮಾನತುಗೊಂಡಿದ್ದರು. ಅಮಾನತುಗೊಂಡ ಸಿಬ್ಬಂದಿ ಪೈಕಿ ಶೇಖರ್ ಬಹುರೂಪಿ ಸಹ ಒಬ್ಬರಾಗಿದ್ದಾರೆ.
ಇದನ್ನೂ ಓದಿ : Lokayukta Raid...ಕೊಡಗು ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ : ಅಧಿಕಾರಿ ಮನೆಯಲ್ಲಿ ನಗದು ಪತ್ತೆ