ತುಮಕೂರು/ಬೆಂಗಳೂರು: ಲೋಕಾಯುಕ್ತ ದಾಳಿ ಪ್ರಕರಣ ಸಂಬಂಧ ಹೈಕೋರ್ಟ್ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಬೆನ್ನಲ್ಲೇ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ಮಾಡಾಳ್ ಅವರನ್ನು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಟೋಲ್ ಬಳಿ ಬಂಧಿಸಲಾಗಿದೆ.
ಇನೋವಾ ಕಾರಿನಲ್ಲಿ ತೆರಳುತ್ತಿದ್ದ ಶಾಸಕ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋದರು. ಬಳಿಕ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆಯಿಂದ ಶಾಸಕರನ್ನು ಲೋಕಾಯುಕ್ತ ಪ್ರಧಾನ ಕಚೇರಿಗೆ ಕರೆದೊಯ್ದು ಪ್ರಕರಣ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ನಾಳೆ ಕೋರ್ಟ್ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಾಡಾಳ್ ಬಂಧನ ಬೆನ್ನಲೇ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಠಾಕೂರ್ ನೇತೃತ್ವದಲ್ಲಿ ಐಜಿಪಿ ಸುಬ್ರಮಣ್ಯೇಶ್ವರಾವ್, ಎಸ್ಪಿ ಅಶೋಕ್ ಅವರನ್ನೊಳಗೊಂಡ ಅಧಿಕಾರಿಗಳು ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಸಭೆ ನಡೆಸಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ನಿಯಮಿತದ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಈ ಮೊದಲು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಜಾಮೀನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಜಾಮೀನು ಆಕ್ಷೇಪದ ಬಗ್ಗೆ ಪ್ರತಿವಾದಿಗಳಿಗೆ ಇಂದು ನೋಟಿಸ್ ಜಾರಿ ಮಾಡಿತ್ತು.
ಈ ಮಧ್ಯೆ ಇಂದು ಮಧ್ಯಾಹ್ನವಷ್ಟೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಬೆನ್ನಲ್ಲೇ ಶಾಸಕರಿಗೆ ಬಂಧನ ಭೀತಿ ಎದುರಾಗಿತ್ತು. ಈ ಮಧ್ಯೆ ಲೋಕಾಯುಕ್ತ ಅಧಿಕಾರಿಗಳು, ಚನ್ನಗಿರಿಯಲ್ಲಿ ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದ್ರೆ ಶಾಸಕರು ಮನೆಯಲ್ಲಿ ಇರಲಿಲ್ಲ. ಲೋಕಾಯುಕ್ತ ಪೊಲೀಸರು ಯಾವುದೇ ಸಂದರ್ಭದಲ್ಲಿಯೂ ಬಂಧಿಸಬಹುದು ಎಂದು ಹೇಳಲಾಗಿತ್ತು.
ಹೈಕೋರ್ಟ್ ಆದೇಶದಲ್ಲಿ ಏನಿದೆ? ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯ ಪೀಠವು ಇಂದು ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಪ್ರಕರಣದಲ್ಲಿ ಅರ್ಜಿದಾರರು ಎ1 ಆರೋಪಿಯಾಗಿರುವ ಸಂಬಂಧ ಸಾಕ್ಷ್ಯಾಧಾರಗಳಿವೆ. ಆದ್ದರಿಂದ ವಿಚಾರಣೆಗೆ ಒಳಪಡಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನು ರದ್ದು ಮಾಡಲಾಗುತ್ತಿದೆ. ಹಾಗೆಯೇ ವಿಚಾರಣೆಗೆ ಸೂಕ್ತ ರೀತಿಯಲ್ಲಿ ಅರ್ಜಿದಾರರು ಸಹಕಾರ ನೀಡದಿದ್ದಲ್ಲಿ ನಿರೀಕ್ಷಣಾ ಜಾಮೀನು ರದ್ದು ಪಡಿಸಬಹುದು ಎಂಬುದನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಹಲವು ಪ್ರಕರಣಗಳಲ್ಲಿ ತಿಳಿಸಿದೆ. ಹಾಗಾಗಿ ನಿರೀಕ್ಷಣಾ ಜಾಮೀನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಇಂದು ತಿಳಿಸಲಾಗಿದೆ.
ಇದನ್ನೂ ಓದಿ: ಕಾಣದ ಕೈಗಳ ಷಡ್ಯಂತ್ರದಿಂದ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಬಂದಿದೆ: ಶಾಸಕ ಮಾಡಾಳ್ ಭಾವುಕ
ಪ್ರಕರಣದ ಹಿನ್ನೆಲೆ? ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ, ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರನ್ನು ಟೆಂಡರ್ ಪ್ರಕ್ರಿಯೆ ಸಂಬಂಧ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಆ ಬಳಿಕ ಪ್ರಶಾಂತ್ ಅವರ ಮನೆಯಲ್ಲಿ ಹಣ ಪತ್ತಿಯಾಗಿತ್ತು. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿಸಲಾಗಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 7 (ಎ) ಮತ್ತು (ಬಿ), 7 ಎ, 8, 9 ಮತ್ತು 10ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಲಂಚ ಆರೋಪ; ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಹೈಕೋರ್ಟ್