ತುಮಕೂರು: ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ದಿಗ್ಗಜರ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಇನ್ನೊಂದೆಡೆ, ಹಾಲಿ ಸಂಸದ ಜಿ.ಎಸ್. ಬಸವರಾಜ್ ಈಗಾಗಲೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದು, ಹೀಗಾಗಿ ಬಿಜೆಪಿ ಟಿಕೆಟ್ ಪಡೆಯಲು ಇಬ್ಬರೂ ಹಿರಿಯ ಮುಖಂಡರ ಹೆಸರು ಕೇಳಿಬರುತ್ತಿದೆ.
ಮಾಜಿ ಸಚಿವ ವಿ.ಸೋಮಣ್ಣ ತುಮಕೂರಿನಿಂದ ಲೋಕಸಭೆಗೆ ಸ್ಪರ್ಧೆ ಮಾಡ್ತಾರೆ. ಅವರ ಬೆಂಬಲಕ್ಕೆ ನಿಲ್ಲಿ ಎಂಬ ಸಂದೇಶವನ್ನು ವೀರಶೈವ ಸಮಾಜಕ್ಕೆ ಸಂಸದ ಜಿ.ಎಸ್.ಬಸವರಾಜು ನೀಡುತ್ತಿದ್ದಾರೆ. ವೀರಶೈವ ಸಮಾಜದ ಕಾರ್ಯಕ್ರಮದಲ್ಲಿ ಜಿ.ಎಸ್.ಬಸವರಾಜು ಹೀಗೆ ಹೇಳಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವೀರಶೈವ ಸಮಾಜ ಒಗ್ಗಟ್ಟಾಗಿದ್ರೆ ಏನು ಬೇಕಾದ್ರೂ ಸಾಧಿಸಬಹುದು. ನಿಮ್ಮಲ್ಲೇ ಕಿತ್ತಾಡಿದ್ರೆ, ನಿಮ್ಮನ್ನೇ ಒದ್ದು ಓಡಿಸುತ್ತಾರೆ. ಅದು ಕೂಡ ಸನ್ನಿಹಿತ. ಯಾವಾಗ ಒಗ್ಗಟ್ಟು ಮುರಿಯುತ್ತೆ, ಏನೇನು ಮಾಡ್ಬೇಕು ಅನ್ನೋದು ಅವರಿಗೆ ಗೊತ್ತಿದೆ. ಕೆಲವೇ ಜನ ಇದ್ದೀರಾ, ಒಟ್ಟಾಗಿರಿ ಎಚ್ಚರಿಕೆ ಕೊಡ್ತಿದೀನಿ. ನನ್ನದಾಯ್ತು, ನನ್ನ ಸೀಟ್‌ನಾ ಸೋಮಣ್ಣಗೆ ಕೊಡ್ತಾರೆ. ನಾನು ಚುನಾವಣೆಯಲ್ಲಿ ನಿಲ್ಲಲ್ಲ, ನಾನು ದೆಹಲಿಗೆ ಹೋಗಿದ್ದಾಗ ಹೇಳಿದ್ದೇನೆ ಎಂದು ಬಸವರಾಜ್ ಹೇಳಿಕೆ ಸಾಕಷ್ಟು ಚರ್ಚೆಯಾಗುತ್ತಿದೆ.
ಮುಂದೆ ಬರೋರನ್ನು ಉಪಯೋಗಿಸಿಕೊಳ್ಳಿ. ಇಬ್ಬಗೆ ನೀತಿ ಮಾಡಿಕೊಳ್ಳಬೇಡಿ. ಅವರ ಮೇಲೆ ಅವರನ್ನು ಅವರ ಮೇಲೆ ಇವರನ್ನು ಎತ್ತಿ ಕಟ್ಟಬೇಡಿ. ಮುಂದೆ ತುಂಬಾ ಜನ ಬರಬೇಕು. 8 ಬಾರಿ ಸ್ಪರ್ಧಿಸಿದ್ದೇನೆ. 5 ಸಲ ಗೆದ್ದಿದ್ದೇನೆ, ಮೂರು ಸಲ ಸೋತಿದ್ದೇನೆ. ನಮ್ಮವರೇ ನನ್ನ ಸೋಲಿಸಿದ್ದು. ನಾನು ಸೋತರೂ ಒಂದೇ, ಗೆದ್ರೂ ಒಂದೇ ಕೆಲಸ ಮಾಡಿಸಿಕೊಂಡು ಬರುತ್ತಿದ್ದೆ ಎಂದು ಜಿ.ಎಸ್.ಬಸವರಾಜು ಹೇಳಿದ್ದಾರೆ.
ಇನ್ನೊಂದೆಡೆ, ಇತ್ತೀಚೆಗಷ್ಟೆ ಬಿಜೆಪಿ ಸೇರಿರುವ ಮಾಜಿ ಸಂಸದ ಮುದ್ದಹನುಮೇಗೌಡ ನಾನೂ ಕೂಡ ಟಿಕೆಟ್ ಬಯಸಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ನಾನು ಕೂಡ ತುಮಕೂರು ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿ. ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ. ಪಕ್ಷ ನನಗೆ ಟಿಕೆಟ್ ಕೊಡುವ ಭರವಸೆ ಇದೆ. ಟಿಕೆಟ್‌ಗಾಗಿ ನಾನು ತಂತ್ರ ಮಾಡಲ್ಲ ಎಂದಿದ್ದಾರೆ.
ಹೀಗಾಗಿ ಜಿಲ್ಲೆಯಲ್ಲಿ ಲೋಕಸಭೆಯ ಬಿಜೆಪಿ ಟಿಕೆಟ್‌ಗಾಗಿ ಮುದ್ದಹನುಮೇಗೌಡ ಮತ್ತು ವಿ. ಸೋಮಣ್ಣ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ ಎಂದೇ ಹೇಳಬಹುದು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಸೋಮಣ್ಣ, ತಮ್ಮ ಮಗನಿಗೆ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಹರಸಾಹಸ ಪಟ್ಟಿದ್ದರು. ಆದರೆ ಅದು ಕೈತಪ್ಪಿ ಹೋಗಿತ್ತು.
ಬಸವರಾಜು ಅವರು ಬಿಜೆಪಿ ಟಿಕೆಟ್ ತೆಗೆದುಕೊಂಡು ಬಂದರೆ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧ್ಯವಿದೆ ಎಂಬ ಆಶ್ವಾಸನೆ ಕೂಡ ಸೋಮಣ್ಣ ಅವರಿಗೆ ನೀಡಿದ್ದರು ಎಂಬ ಮಾತುಗಳು ಕೇಳಿ ಬರುತ್ತದೆ. ಆದರೆ ಬಿಜೆಪಿ ಟಿಕೆಟ್ ತಮ್ಮ ಮಗನಿಗೆ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ದೊರೆಯಲಿಲ್ಲ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಾದರೂ ಸೋಮಣ್ಣ ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕಿದೆ ಎಂಬ ಮಾತುಗಳನ್ನು ಬಸವರಾಜ್ ಹೇಳುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂಓದಿ: Basavaraja Bommai: ಲೋಕಸಭೆ ಚುನಾವಣೆಗೆ ಶಾಸಕರಿಗೆ ಗುರಿ ನೀಡುವ ಕುರಿತು ಚರ್ಚೆ- ಬಸವರಾಜ ಬೊಮ್ಮಾಯಿ