ತುಮಕೂರು: ಲಾಕ್ಡೌನ್ ವಿಚಾರದಲ್ಲಿ ಸಂಕಷ್ಟಕ್ಕೆ ಒಳಗಾಗದವರಿಲ್ಲ. ಜಿಲ್ಲೆಯ ವಲಸೆ ಕಾರ್ಮಿಕ ಸ್ಥಿತಿಯಂತೂ ದೇವರಿಗೇ ಪ್ರೀತಿ. ಜಿಲ್ಲೆಯಲ್ಲಿ ವಿವಿಧ ಕಡೆಗಳಿಂದ ಬಂದ ಸುಮಾರು 6,820 ವಲಸೆ ಕಾರ್ಮಿಕರಿದ್ದಾರೆ. ಇವರಿಗೆ ಲಾಕ್ಡೌನ್ ವೇಳೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ 96 ಕ್ಯಾಂಪ್ಗಳನ್ನು ತೆರೆಯಲಾಗಿದೆ. ಈ ಕ್ಯಾಂಪ್ಗಳಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 7 ಸರ್ಕಾರಿ ಕ್ಯಾಂಪ್ಗಳಿದ್ದು ತುಮಕೂರು ನಗರದಲ್ಲಿರುವ 1 ಕ್ಯಾಂಪ್ನಲ್ಲಿ 316, ಮಧುಗಿರಿಯ ಎರಡು ಕ್ಯಾಂಪ್ಗಳಲ್ಲಿ 86, ತುರುವೇಕೆರೆಯ ನಾಲ್ಕು ಕ್ಯಾಂಪ್ಗಳಲ್ಲಿ 111 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.
ವಿವಿಧ ಸರ್ಕಾರಿ ಹಾಗೂ ಖಾಸಗಿ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದ 5,212 ಕಾರ್ಮಿಕರಿಗೆ ಖಾಸಗಿಯಾಗಿ 89 ಕ್ಯಾಂಪ್ಗಳನ್ನು ನಿರ್ಮಿಸಲಾಗಿದೆ. ತುಮಕೂರು ನಗರದಲ್ಲಿರುವ 11 ಕ್ಯಾಂಪ್ಗಳಲ್ಲಿ 1,188, ತಿಪಟೂರಿನ 17 ಕ್ಯಾಂಪ್ಗಳಲ್ಲಿ 1,050, ಶಿರಾದ 18 ಕ್ಯಾಂಪ್ಗಳಲ್ಲಿ 471, ಚಿಕ್ಕನಾಯಕಹಳ್ಳಿಯ 4 ಕ್ಯಾಂಪ್ಗಳಲ್ಲಿ 600, ಗುಬ್ಬಿಯ 12 ಕ್ಯಾಂಪ್ನಲ್ಲಿ 1339, ಮಧುಗಿರಿಯ 6 ಕ್ಯಾಂಪ್ನಲ್ಲಿ 201, ಪಾವಗಡ 5 ಕ್ಯಾಂಪ್ಗಳಲ್ಲಿ 183, ಕುಣಿಗಲ್ನ 16 ಕ್ಯಾಂಪ್ಗಳಲ್ಲಿ 180 ಮಂದಿಗೆ ಆಶ್ರಯ ನೀಡಲಾಗಿದೆ. ಇದರ ಜೊತೆಗೆ ತುಮಕೂರಿನ ವಿವಿಧ ಭಾಗಗಳಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಆಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಪಡಿತರ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ನಿರಾಶ್ರಿತರ ಕ್ಯಾಂಪ್ಗಳಲ್ಲಿರುವ ಬಹುತೇಕ ಮಂದಿ ಬೆಂಗಳೂರಿನಿಂದ ತುಮಕೂರು ಮೂಲಕ ಉತ್ತರ ಕರ್ನಾಟಕದ ಭಾಗದ ತಮ್ಮ ತಮ್ಮ ಗ್ರಾಮಗಳಿಗೆ ತಲುಪುತ್ತಿದ್ದ ಕೂಲಿ ಕಾರ್ಮಿಕರು. ಕೊರೊನಾ ಭೀತಿ ಎದುರಾಗುತ್ತಿದ್ದಂತೆ ತಮ್ಮೂರುಗಳಿಗೆ ಖಾಸಗಿ ವಾಹನಗಳ ಮೂಲಕ ತೆರಳುತ್ತಿದ್ದ ಇವರನ್ನು ಜಿಲ್ಲಾಡಳಿತ ಕರೆದುಕೊಂಡು ಬಂದು ನಿರಾಶ್ರಿತರ ಕೇಂದ್ರಗಳಲ್ಲಿ ಇರಿಸಿದೆ. ಇವರಲ್ಲಿ ಬಹುತೇಕರು ಗಾರೆ ಕೆಲಸ ಹಾಗೂ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ಇವರೆಲ್ಲರಿಗೂ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಸ್ವಚ್ಚತೆಯನ್ನು ಕಾಪಾಡಿಕೊಂಡು ಅವರೆಲ್ಲರ ಆರೋಗ್ಯದ ಕಡೆ ಗಮನ ಹರಿಸಲಾಗಿದೆ.
ತುಮಕೂರಿನಲ್ಲಿ ಹೇಗಿದೆ ಪಡಿತರ ವ್ಯವಸ್ಥೆ?
ಸಂಪೂರ್ಣ ಲಾಕ್ಡೌನ್ ಆಗಿರುವ ಆಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ ಎರಡು ತಿಂಗಳ ಅಕ್ಕಿ ಹಾಗೂ ಗೋಧಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಅದರಂತೆ ತುಮಕೂರು ಜಿಲ್ಲೆಯಲ್ಲಿಯೂ ವಿತರಿಸಲಾಗುತ್ತಿದೆ
ತುಮಕೂರು ಗ್ರಾಮೀಣ ಭಾಗದ ಕೆಲವೆಡೆ ಅಕ್ಕಿ ಸರಬರಾಜಾಗಿದ್ದರೂ, ಗೋಧಿ ಸರಬರಾಜು ಆಗದ ಹಿನ್ನೆಲೆಯಲ್ಲಿ ಜನರಿಗೆ ನ್ಯಾಯಬೆಲೆ ಅಂಗಡಿ ಮಾಲೀಕರು ಇನ್ನೂ ಪಡಿತರ ವಿತರಣೆ ಆರಂಭಿಸಿಲ್ಲ. ಪಡಿತರ ಚೀಟಿ ಹೊಂದಿರುವ ಕುಟುಂಬದ ಮೊಬೈಲ್ಗೆ ಓಟಿಪಿ ಬಂದರೆ ಮಾತ್ರ ಪಡಿತರ ನೀಡಲಾಗುವುದು ಎಂದು ನ್ಯಾಯಬೆಲೆ ಅಂಗಡಿ ಪರವಾನಗಿದಾರರು ಹೇಳುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಶುರುವಾಗಿದೆ. ನಗರ ಪ್ರದೇಶದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸದೇ ಜನರು ಪಡಿತರ ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.