ಬೆಂಗಳೂರು/ತುಮಕೂರು : ಸಾಹಿತಿ, ಹೋರಾಟಗಾರ ಕೆ ಬಿ ಸಿದ್ದಯ್ಯ (70) ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
80ರ ದಶಕದಲ್ಲಿ ದಲಿತ ಚಳವಳಿಯ ಮುಂಚೂಣಿಯಲ್ಲಿದ್ದವರು ಸಾಹಿತಿ ಕೆ ಬಿ ಸಿದ್ದಯ್ಯ. ಪ್ರತಿ ಹೋರಾಟಗಳ ಸಂದರ್ಭಕ್ಕೆ ಅನುಗುಣವಾಗಿ ಕವಿತೆ ರಚಿಸಿ ಹಾಡುವ ಮೂಲಕ ಚಳವಳಿ ಕಾವು ಪಡೆದುಕೊಳ್ಳಲು ಸಹಕಾರ ನೀಡುತ್ತಿದ್ದರು. ದಲಿತ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿದ್ದಯ್ಯನವರು, ದಕ್ಕಲ ಕಥಾದೇವಿ,ಬಕಾಲ, ಗಲ್ಲೆಭಾನಿ ಸೇರಿ ಹಲವು ಖಂಡಕಾವ್ಯ ರಚಿಸಿದ್ದಾರೆ. ಸಮಾಜದ ನೋವು ನಲಿವುಗಳಿಗೆ ಧ್ವನಿಯಾಗಿದ್ದವರು ಕೆ ಬಿ ಸಿದ್ದಯ್ಯ, ಶ್ರೀಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಧ್ಯಾಪಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿದ್ದರು.
ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4:15ರ ಸುಮಾರಿಗೆ ಕೊನೆಯುಸಿರೆಳೆದರು. ಸಿದ್ದಯ್ಯನವರ ಅಗಲಿಕೆಯಿಂದ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಶಿಷ್ಯವೃಂದ ಶೋಕಸಾಗರದಲ್ಲಿ ಮುಳುಗಿದೆ.