ತುಮಕೂರು: ಹಲವು ಮಹಿಳೆಯರು ಸರ್ಕಾರದ ಹೆಲ್ಪ್ ಲೈನ್ಗೆ ಫೋನ್ ಮಾಡಿ ಮದ್ಯ ಮಾರಾಟವನ್ನು ನಿಲ್ಲಿಸಿ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ನಮ್ಮೆಜಮಾನ್ರು ಕುಡಿಯುವುದನ್ನು ಬಿಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುಡಿತ ಬಿಡುವವರಿಗೆ ಇದೊಂದು ಸುವರ್ಣಾವಕಾಶ. ದಯವಿಟ್ಟು ಕುಡಿತವನ್ನು ಬಿಡಿ ಎಂದು ಹೇಳಿದರು. ಕೆಲವರು ಮದ್ಯಕ್ಕಾಗಿ ಬಾರ್ಗಳಿಗೆ ಕನ್ನ ಹಾಕುತ್ತಿರುವುದು ಕೇಳಿದ್ದೇನೆ. ಸದ್ಯಕ್ಕೆ ಊಟದ ವ್ಯವಸ್ಥೆಯನ್ನು ಮಾತ್ರ ಸರ್ಕಾರ ಮಾಡಲಿದೆ ಎಂದರು.
ರಾಜ್ಯದಲ್ಲಿ 33 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿದೆ. ಎಸ್ಡಿಆರ್ಎಸ್ ಮೂಲಕ 45 ಕೋಟಿ ರೂ. ಹಣ ಮೂರು ದಿನದೊಳಗೆ ರೈತರ ಖಾತೆಗಳಿಗೆ ಜಮಾ ಆಗಲಿದೆ. ಎರಡು ತಿಂಗಳ ವೃದ್ಧಾಪ್ಯ ವೇತನವನ್ನು ಈಗಾಗಲೇ ಖಾತೆಗಳಿಗೆ ಜಮಾ ಮಾಡಲಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಪರೀಕ್ಷೆ ನಡೆಸುವ ಯಾವುದೇ ರೀತಿಯ ಕಿಟ್ಗಳ ಕೊರತೆಯಿಲ್ಲ ಎಂದರು.
ಸರ್ಕಾರಿ ನೌಕರರ ವೇತನದಲ್ಲಿ ಕಡಿತಗೊಳಿಸುವ ಅಂತಹ ಯಾವುದೇ ಪ್ರಸ್ತಾಪ ರಾಜ್ಯದಲ್ಲಿ ಇಲ್ಲ ಎಂದು ಹೇಳಿದರು. ತುಮಕೂರು ತಾಲೂಕು ವ್ಯಾಪ್ತಿಯಲ್ಲಿ ಬಡವರಿಗೆ ಪಡಿತರ ವಿತರಣೆ ಮಾಡಿ, ಕೊರೊನಾ ಕುರಿತು ಜಾಗೃತಿಯನ್ನು ಮೂಡಿಸಿದರು. ಅಲ್ಲದೇ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಇದ್ದಿದ್ದು ಕಂಡು ಬಂತು.