ತುಮಕೂರು: ಕೊರಮ, ಕೊರಚ, ಭೋವಿ,ಲಂಬಾಣಿ ಜಾತಿಗಳನ್ನ ಎಸ್ಸಿ ಪಟ್ಟಿಯಲ್ಲಿ ಮುಂದುವರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಜೂನ್ 10ರಂದು ಪತ್ರ ಚಳುವಳಿಯ ಮೂಲಕ ಮನವಿ ಮಾಡಲಾಗುವುದು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಹಿತಾಸಕ್ತಿ ಗುಂಪೊಂದು ಪರಿಶಿಷ್ಟ ಜಾತಿಯ ಐಕ್ಯತೆಯನ್ನ ಒಡೆಯುವ ಹಿನ್ನೆಲೆಯಲ್ಲಿ, 2019ರ ಡಿಸೆಂಬರ್ ತಿಂಗಳಿನಲ್ಲಿ ಕೊರಮ, ಕೊರಚ, ಭೋವಿ, ಲಂಬಾಣಿ ಜಾತಿಗಳನ್ನ ಎಸ್ಸಿ ಪಟ್ಟಿಯಿಂದ ಕೈಬಿಡುವಂತೆ ಕೋರಿ ಸುಪ್ರೀಂಕೋರ್ಟಿಗೆ ಪಿಐಎಲ್ ಹಾಕಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಭಾರತ ಸಂವಿಧಾನದ ಅನುಚ್ಛೇದ 341(1) ಉಪವರ್ಗ -6(ಕೆ) ಅನುಸಾರ ಯಾವುದೇ ಒಂದು ನ್ಯಾಯಾಂಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯಗಳನ್ನ ಕೋರ್ಟ್ ವ್ಯಾಪ್ತಿಯಲ್ಲಿ ತೀರ್ಮಾನ ಮಾಡಬಾರದೆಂದು ಸಂವಿಧಾನದಲ್ಲಿ ಉಲ್ಲೇಖವಿದೆ. ಹಾಗಾಗಿ, ಕೋರ್ಟ್ ಪ್ರಕರಣವನ್ನು ವಜಾ ಮಾಡುವ ಜೊತೆಗೆ ಮನವಿಯನ್ನು ರಾಷ್ಟ್ರೀಯ ಎಸ್ಸಿ ಕಮಿಷನ್ಗೆ ತಿಳಿಸುವಂತೆ ಸೂಚಿಸಿತ್ತು.
ಎಸ್ಸಿ ಆಯೋಗವು ಕರ್ನಾಟಕ ಸರ್ಕಾರಕ್ಕೆ ಫೆಬ್ರವರಿ 24ರಂದು ಬರೆದ ಪತ್ರ ಬರೆದಿತ್ತು. ಈ ಪತ್ರದಲ್ಲಿ ರಾಜ್ಯದಲ್ಲಿರುವ ಕೊರಚ, ಕೊರಮ, ಲಂಬಾಣಿ, ಭೋವಿ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ತೆಗೆಯುವಂತೆ ಕೆಲವರು ಪತ್ರ ಬರೆದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಜನಾಂಗದವರಲ್ಲಿ ಅಭಿಪ್ರಾಯ ಕೇಳಬೇಕು ಎಂದು ತಿಳಿಸಿತ್ತು. ಆದರೆ, ಕೆಲವರು ಸರ್ಕಾರ ಈಗಾಗಲೇ ಎಸ್ಸಿ ಪಟ್ಟಿಯಿಂದ ಉಲ್ಲೇಖಿಸಲಾದ ಜಾತಿಗಳನ್ನು ತೆಗೆದು ಹಾಕಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಹೀಗಾಗಿ, ಈ ಜಾತಿಗಳನ್ನು ಎಸ್ಸಿ ಪಟ್ಟಿಯಲ್ಲಿ ಮುಂದುವರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಜೂನ್ 10ರಂದು ಪತ್ರ ಚಳುವಳಿಯ ಮೂಲಕ ಮನವಿ ಮಾಡಲಾಗುವುದು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಕಿರಣ್ ಕುಮಾರ್ ಕೊತ್ತಗೆರೆ ಎಚ್ಚರಿಸಿದ್ದಾರೆ.