ತುಮಕೂರು: ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಐವರನ್ನು ಕೊಂದು ಹಾಕಿದ್ದ ಚಿರತೆಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ. ಚಿರತೆ ಪತ್ತೆಗಾಗಿ ಅರಣ್ಯ ಇಲಾಖೆ ಒಟ್ಟು 46 ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿತ್ತು.
ಅವುಗಳಲ್ಲಿ ಸೆರೆಯಾಗಿದ್ದ ಚಿರತೆಯ 10 ಫೋಟೋಗಳನ್ನು ಆಯ್ಕೆ ಮಾಡಿಕೊಂಡು ಜನರ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನು ಪತ್ತೆಹಚ್ಚಲಾಗಿದೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಹೌದು, ಕ್ಯಾಮೆರಾದಲ್ಲಿ ದಾಖಲಾಗಿದ್ದ ಚಿರತೆಯ 10 ವಿವಿಧ ಫೋಟೋಗಳನ್ನು ಬಿಡುಗಡೆ ಮಾಡಿರುವ ಅರಣ್ಯ ಇಲಾಖೆ ಖಚಿತಪಡಿಸಿದೆ. ಸುತ್ತಮುತ್ತಲ ಒಂದೇ ಪ್ರದೇಶದಲ್ಲಿ ಈ ಚಿರತೆಯ ಚಲನವಲನವನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಅಲ್ಲದೇ ಚಿರತೆಯ ಬಲಭಾಗ ಮತ್ತು ಎಡಭಾಗದ ಗುರುತುಗಳನ್ನು ಮತ್ತು ಬಾಲದ ಗುರುತನ್ನು ಹಾಗೂ ಹೆಜ್ಜೆ ಗುರುತನ್ನು ಪರಿಗಣನೆಗೆ ತೆಗೆದುಕೊಂಡು ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಎಂದು ಸ್ಪಷ್ಟಪಡಿಸಲಾಗಿದೆ.
ಚಿರತೆ ಸೆರೆಗಾಗಿ ಗ್ರಾಮಸ್ಥರು ಮಾಡಿದ ಮನವಿ ಹಿನ್ನೆಲೆ ಅರಣ್ಯ ಇಲಾಖೆ ಚಿರತೆ ಬಾಧಿತ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‍ಗಳನ್ನು ಅಳವಡಿಸಿ ಚಿರತೆಗಳ ಚಲನವಲನಗಳ ಬಗ್ಗೆ ನಿಗಾ ಇಟ್ಟಿತ್ತು. ಇದರಿಂದ ಚಿರತೆ ಪತ್ತೆಹಚ್ಚಲು ಸಹಕಾರಿಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ನಡು ರಸ್ತೆಯಲ್ಲಿ 3 ಚಿರತೆಗಳು ಪ್ರತ್ಯಕ್ಷ: ಆತಂಕಗೊಂಡ ಪ್ರಯಾಣಿಕರು