ತುಮಕೂರು: ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವುದು ಸಂಬಂಧಿಕರಿಗೆ ಸಾಕಷ್ಟು ದುಸ್ತರವೆನಿಸಿದೆ. ಅತಿ ಸಮೀಪದ ಸಂಬಂಧಿಕರು ಸಹ ಮೃತರ ಅಂತ್ಯಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ಸಾಕಷ್ಟು ಕಸಿವಿಸಿಯುಂಟು ಮಾಡಿತ್ತು.
ಇದನ್ನು ಮನಗಂಡ ತುಮಕೂರಿನ ಸುಮಾರು ಹದಿನಾಲ್ಕು ಮಂದಿಯ ತಂಡವು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಅಂತ್ಯಸಂಸ್ಕಾರಕ್ಕೆ ಸಾಥ್ ನೀಡುತ್ತಿದೆ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖ್ಯಸ್ಥರೂ ಆಗಿರುವ ಸಾಮಾಜಿಕ ಕಾರ್ಯಕರ್ತ ತಾಜುದ್ದಿನ್ ಶರೀಫ್ ಹಾಗೂ ಅವರ ಸಮಾನ ಮನಸ್ಕರು ಮೇ ತಿಂಗಳಲ್ಲಿ ಜಿಲ್ಲಾಧಿಕಾರಿ ಭೇಟಿ ಮಾಡಿ ಅಂತ್ಯಸಂಸ್ಕಾರದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಮಾಹಿತಿ ನೀಡಿದರು.
ಅಲ್ಲದೇ ನಿತ್ಯ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಕೂಡ ಏರಿಕೆಯಾಗುತ್ತಲೇ ಇತ್ತು. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತವು ಸಹ ಇದಕ್ಕೆ ಸಂಪೂರ್ಣ ಒಪ್ಪಿಗೆ ನೀಡಿತ್ತು. ತಾಜುದ್ದೀನ್ ಶರೀಫ್ ಅವರ ತಂಡಕ್ಕೆ ವಿಶೇಷವಾಗಿ ಅಂತ್ಯಸಂಸ್ಕಾರದ ವೇಳೆ ತೆಗೆದುಕೊಳ್ಳಬೇಕಾದಂತಹ ಮುಂಜಾಗ್ರತಾ ಕ್ರಮಗಳ ಬಗ್ಗೆ ತರಬೇತಿಯನ್ನು ಜಿಲ್ಲಾಡಳಿತವೇ ನೀಡಿದೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗದರ್ಶನದಂತೆ ಈ ತಂಡವು ಇದುವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 180 ಮಂದಿಯ ಶವಗಳ ಅಂತ್ಯಸಂಸ್ಕಾರ ನಡೆಸಿದ್ದಾರೆ. ಯಾವುದೇ ಜಾತಿ, ಧರ್ಮ, ಜನಾಂಗ ಇರಲಿ ಕೊರೊನಾ ಸೋಂಕಿನಿಂದ ಮೃತಪಟ್ಟರೆ ಅಂತಹ ವ್ಯಕ್ತಿಗಳ ಶವವನ್ನು ಆಯಾ ಧರ್ಮದ ವಿಧಿ ವಿಧಾನದಂತೆ ನೆರವೇರಿಸುತ್ತಿದ್ದಾರೆ.
ಶವಗಳನ್ನು ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಜಿಲ್ಲಾಸ್ಪತ್ರೆಯಿಂದಲೇ ಮಾಡಲಾಗುತ್ತದೆ. ತೀರಾ ಕಡುಬಡವರು ಮೃತಪಟ್ಟರೆ, ಅಲ್ಲದೇ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದವರಿಗೆ ಈ ತಂಡದ ಸದಸ್ಯರು ಹಣವನ್ನು ಒಟ್ಟುಗೂಡಿಸಿ ಆರ್ಥಿಕ ಸಹಾಯವನ್ನು ಮಾಡುತ್ತಾರೆ. ಈ ತಂಡದಲ್ಲಿ ಇರುವವರು ಬಹುತೇಕ ಎಲ್ಲರೂ ವ್ಯಾಪಾರ ವಹಿವಾಟು ನಡೆಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ.
ಪ್ರತಿಬಾರಿ ಜಿಲ್ಲೆಯ ಯಾವುದೇ ಮೂಲೆಯಲ್ಲಿ ಈ ರೀತಿಯ ಅಂತ್ಯಸಂಸ್ಕಾರ ಮಾಡುವ ಸದಸ್ಯರು ಸ್ವತಃ ಶವ ಹೂತ ನಂತರ ಮಣ್ಣು ಹಾಕಿ ಮತ್ತೆ ಬ್ಲೀಚಿಂಗ್ ಪೌಡರ್ ಹಾಕುತ್ತಾರೆ. ಅಲ್ಲದೇ ತಾವು ಧರಿಸಿದ್ದ ಪಿಪಿಇ ಕಿಟ್ ಮತ್ತಿತರ ವಸ್ತುಗಳನ್ನು ಸ್ಥಳದಲ್ಲಿಯೇ ಸುಟ್ಟು ಹಾಕುತ್ತಾರೆ. ಮೃತರ ಸಂಬಂಧಿಕರು ಅಂತ್ಯಸಂಸ್ಕಾರದ ಸಮೀಪ ನಿಗದಿತ ಅಂತರದಲ್ಲಿ ಇರುವಂತೆ ಸಲಹೆ ನೀಡುತ್ತಾರೆ. ಅಂತಿಮ ಬಾರಿಗೆ ಮೃತದೇಹದ ಮುಖವನ್ನು ತೋರಿಸುವ ವ್ಯವಸ್ಥೆ ಕೂಡ ಮಾಡುತ್ತಾ ಬಂದಿದ್ದಾರೆ. ಈ ತಂಡದ ಕಾರ್ಯ ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿದೆ.