ತುಮಕೂರು : ಕೊರೊನಾ ಹಿನ್ನೆಲೆ ಈ ಬಾರಿ ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿದೆ. ಇದರಿಂದ ನಗರದಲ್ಲಿರುವ ವಿಶ್ವವಿದ್ಯಾಲಯದ ಬಹುಪಾಲು ಎಲ್ಲಾ ಪದವಿ ಕಾಲೇಜುಗಳಲ್ಲಿನ ವಿವಿಧ ಕೋರ್ಸುಗಳಿಗೆ ಬೇಡಿಕೆ ಹೆಚ್ಚಿದೆ.
2019-2020ರ ಸಾಲಿನಲ್ಲಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ 14,404 ವಿದ್ಯಾರ್ಥಿಗಳು ಪಾಸಾಗಿದ್ದರು. ಇನ್ನು, 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ದಾಖಲಾಗಿದ್ದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದ 14,404 ಮಂದಿಯಲ್ಲಿ 11,627 ವಿದ್ಯಾರ್ಥಿಗಳು ಪದವಿಗೆ ದಾಖಲಾಗಿದ್ದರು.
ಪದವಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ದಾಖಲು : ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ 12,961 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಪಾಸಾದ ವಿದ್ಯಾರ್ಥಿಗಳಲ್ಲಿ ಕೆಲವರು ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿದ್ದು, ಕನಿಷ್ಠ 23 ಸಾವಿರ ವಿದ್ಯಾರ್ಥಿಗಳು ಪದವಿ ಕಾಲೇಜುಗಳತ್ತ ಮುಖ ಮಾಡಲಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿದೆ.
ಶೇ. 20 ದಾಖಲಾತಿ ಹೆಚ್ಚಳ : ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 20 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಎಲ್ಲಾ 93 ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಶೇ. 20ರಷ್ಟು ದಾಖಲಾತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಹೆಚ್ಚುವರಿ ದಾಖಲಾತಿ ಬಳಿಕವೂ ಕೆಲ ಕಾಲೇಜುಗಳಲ್ಲಿ ಅಗತ್ಯವೆನಿಸಿದರೆ ಹೆಚ್ಚುವರಿ ಕೊಠಡಿಗಳನ್ನು ತೆರೆದು ಪಾಳಿ ಅನ್ವಯ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಅಕ್ಟೋಬರ್ನಿಂದ ಎನ್ಇಪಿ ಜಾರಿ : ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಗೊಳಿಸಲಾಗುತ್ತಿದೆ. ನಾಲ್ಕು ವರ್ಷದ ಆನರ್ಸ್ ಕೋರ್ಸ್ ಆರಂಭವಾಗುತ್ತಿದೆ. ಮೊದಲ ವರ್ಷಕ್ಕೆ ಸರ್ಟಿಫಿಕೇಟ್, ಎರಡನೇ ವರ್ಷಕ್ಕೆ ಬಿಟ್ಟರೆ ಡಿಪ್ಲೊಮಾ, ಮೂರನೇ ವರ್ಷಕ್ಕೆ ಪದವಿ, ನಾಲ್ಕನೇ ವರ್ಷಕ್ಕೆ ವಿದ್ಯಾಭ್ಯಾಸ ಮುಗಿಸಿದರೆ ಅನರ್ಸ್ ನೀಡಲಾಗುವುದು. 4 ವರ್ಷದ ಆನರ್ಸ್ ಪದವಿ ಪಡೆದವರು ಪಿಹೆಚ್ಡಿ ಮಾಡುವ ಅರ್ಹತೆ ಹೊಂದಿರುತ್ತಾರೆ.
ಓದಿ: ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ?