ತುಮಕೂರು: ಸಾಹಿತಿಯಾಗಿ ಕುವೆಂಪುರವರ ಜೀವನ ಪ್ರಾರಂಭವಾದದ್ದು ಇಂಗ್ಲಿಷ್ನಲ್ಲಿ ಗೀತೆಗಳನ್ನು ರಚಿಸುವ ಮೂಲಕ, ಕುವೆಂಪು ಅವರು ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯದ ಕಡೆಗೆ ತಮ್ಮ ಒಲವು ಬೆಳೆಸಿಕೊಂಡವರು ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಚಿದಾನಂದ ಅವರು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು ಕುವೆಂಪು ಅಧ್ಯಯನ ಪೀಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಡಾ. ರಾಮಮನೋಹರ ಲೋಹಿಯಾ ಸಮತಾ ವಿಶ್ವವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಕುವೆಂಪು ಜನ್ಮದಿನಾಚರಣೆ ಹಾಗೂ ಕುವೆಂಪು ಓದು ಅಭಿಯಾನವನ್ನು ತುಮಕೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುವೆಂಪು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ. ಚಿದಾನಂದ ಅವರು, ಈಗಿನ ಯುವ ವಿದ್ಯಾರ್ಥಿಗಳು ಕುವೆಂಪು ಅವರು ರಚಿಸಿರುವ ಕವನಗಳನ್ನು, ಸಣ್ಣ ಕಥೆಗಳು ಜೊತೆಗೆ ಕಾದಂಬರಿಗಳನ್ನು ಓದುವ ಮೂಲಕ ಅವರನ್ನು ತಿಳಿಯಬಹುದು. ಕುವೆಂಪು ಕನ್ನಡ ಭಾಷೆಯ ಪ್ರಿಯರಾಗಿದ್ದರು. ಕತೆ, ಕವನ, ಕಾವ್ಯ, ಕಾದಂಬರಿ, ವಿಮರ್ಶೆ ಹೀಗೆ 32 ವಿಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರು.
ಅಲ್ಲದೇ ಸಾಹಿತಿಯಾಗಿ ಅವರ ಜೀವನ ಪ್ರಾರಂಭವಾದದ್ದು, ಇಂಗ್ಲಿಷ್ನಲ್ಲಿ ಗೀತೆಗಳನ್ನು ರಚಿಸುವ ಮೂಲಕ. ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯದ ಕಡೆಗೆ ತಮ್ಮ ಒಲವು ಬೆಳೆಸಿಕೊಂಡವರು ಎಂದು ಕುವೆಂಪುರವರ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ತಿಳಿಸಿದರು.