ತುಮಕೂರು: ನಿವೇಶನ ರಹಿತ ಮತ್ತು ವಸತಿ ರಹಿತ ಹೋರಾಟ ಸಮಿತಿಯ ಸೂರಿಗಾಗಿ ಕೋಟಿ ಹೆಜ್ಜೆಯ ಐತಿಹಾಸಿಕ ಕಾಲ್ನಡಿಗೆ ಜಾಥಾವನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಿಪಿಐನ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾತಿ ಸುಂದರೇಶ್, ಯಾವುದೇ ಒಂದು ರಾಜಕೀಯ ಪಕ್ಷ ಇಲ್ಲಿಯವರೆಗೂ ಇಂತಹ ಸುದೀರ್ಘ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿಲ್ಲ. ಸಿಪಿಐ ನೇತೃತ್ವದಲ್ಲಿ ಜಾಥಾವನ್ನು ಫೆ. 2ರಂದು ಬಳ್ಳಾರಿಯಿಂದ ಆರಂಭಿಸಲಾಗಿದ್ದು, ಹಿಂದುಳಿದ, ಅಲ್ಪಸಂಖ್ಯಾತ ಪ್ರದೇಶಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ಸುಮಾರು ಎರಡು ಕೋಟಿ ಜನರು ನಿವೇಶನ ರಹಿತ ಹಾಗೂ ವಸತಿ ರಹಿತವಾಗಿ ಜೀವನ ನಡೆಸುತ್ತಿದ್ದಾರೆ.
ಇವರ ಸಮಸ್ಯೆ ಬಗೆಹರಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸೂರಿಗಾಗಿ ಕೋಟಿ ಹೆಜ್ಜೆ ಐತಿಹಾಸಿಕ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸದ್ಯ ಜಾಥಾ ಈಗ ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿಯ ತಾಳಗುಂದದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಕೊರೊನಾ ವೈರಸ್ ಭೀತಿ ದೂರವಾದ ನಂತರ ಇಲ್ಲಿಂದಲೇ ಕಾಲ್ನಡಿಗೆ ಜಾಥಾವನ್ನು ಮುಂದುವರೆಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.