ಬೆಂಗಳೂರು/ತುಮಕೂರು: ಶಿರಾ ಕ್ಷೇತ್ರಕ್ಕೆ ಜೆಡಿಎಸ್ನಿಂದ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡುವ ಮೂಲಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ವಿಧಾನಪರಿಷತ್ ಚುನಾವಣೆ ಸಂಬಂಧ ಕರೆದಿದ್ದ ಸಭೆಗೂ ಮುನ್ನ ಮಾತನಾಡಿದ ಅವರು, ಮಾಜಿ ಸಚಿವ ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರೇ ಜೆಡಿಎಸ್ ಅಭ್ಯರ್ಥಿ. ಇದರಲ್ಲಿ ಎರಡು ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದರಲ್ಲಿ ಯಾವುದೇ ಗೊಂದಲ ಇಲ್ಲ. ಅಮ್ಮಾಜಮ್ಮ ಅವರೇ ಅಭ್ಯರ್ಥಿ. ನಾನು ಕೂಡ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ ಎಂದು ದೇವೇಗೌಡರು ತಿಳಿಸಿದರು.
ಆರ್ಆರ್ ನಗರಕ್ಕೂ ಅಭ್ಯರ್ಥಿ..
ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಖಂಡಿತವಾಗಿಯೂ ಅಭ್ಯರ್ಥಿ ಹಾಕುತ್ತೇವೆ. ಮೂವರನ್ನು ಆಯ್ಕೆ ಮಾಡಲಾಗಿದೆ. ಅ. 8 ರಂದು ಒಬ್ಬರನ್ನು ಆಯ್ಕೆ ಮಾಡುತ್ತೇವೆ. ಸೋಲು-ಗೆಲುವು ಬೇರೆ. ಆದರೆ ಅಭ್ಯರ್ಥಿಯನ್ನಂತು ಹಾಕೇ ಹಾಕುತ್ತೇವೆ ಎಂದು ಹೇಳಿದರು.
ಅಮ್ಮಾಜಮ್ಮರಿಗೆ ಉಪ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ಆ ರೀತಿಯ ಕಲ್ಪನೆ ಬೇಡ. ಎಲ್ಲರೂ ಸ್ಪರ್ಧೆಗೆ ಒಪ್ಪಿದ್ದಾರೆ. ಅವರ ಮಗ ಹಾಗೂ ಪಕ್ಷದ ಕಾರ್ಯಕರ್ತರು ಎಲ್ಲರೂ ಒಪ್ಪಿದ್ದಾರೆ. ಸತ್ಯನಾರಾಯಣ ಅವರ ಪತ್ನಿಯೇ ಜೆಡಿಎಸ್ ಅಭ್ಯರ್ಥಿ. ಅವರ ಮಗ ತುಂಬಾ ಚುರುಕಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಬಗ್ಗೆ ಯಾರಿಗೂ ಅನುಕಂಪ ಬೇಡ..
ನಮ್ಮ ಪಕ್ಷದವರನ್ನು ಕಾಂಗ್ರೆಸ್, ಬಿಜೆಪಿಯವರು ಸೆಳೆದುಕೊಂಡಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಜೆಡಿಎಸ್ ಬಗ್ಗೆ ಯಾರಿಗೂ ಅನುಕಂಪ ಬೇಡ. ಎರಡು ರಾಷ್ಟ್ರೀಯ ಪಕ್ಷಗಳು ಗೆಲ್ಲುವುದಕ್ಕೆ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ನಾವು ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೆಚ್ಡಿಡಿ ತಿಳಿಸಿದರು.