ತುಮಕೂರು: ಜಿಲ್ಲೆಯ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಜಾನುವಾರುಗಳಿಗೆ ಬೇಡಿಕೆ ಹೆಚ್ಚಿದ್ದು, ರೈತರು ಖರೀದಿಗೆ ಮುಗಿಬಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.
ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಗೆ ರಾಮನಗರ, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದ ರೈತರು ಆಗಮಿಸುತ್ತಿದ್ದು, ಅವರು ಹೆಚ್ಚಾಗಿ ಹಳ್ಳಿಕಾರ್ ತಳಿಯ ರಾಸುಗಳನ್ನೇ ಖರೀದಿಸುತ್ತಿದ್ದಾರೆ. ಹೀಗಾಗಿ ಸಿದ್ಧಗಂಗಾ ಮಠದ ಜಾನುವಾರು ಜಾತ್ರೆಯಲ್ಲಿ ಹಳ್ಳಿಕಾರ್ ತಳಿಗೆ ಬಹು ಬೇಡಿಕೆ ಬಂದಿದೆ. ರಾಜ್ಯ ಮಾತ್ರವಲ್ಲದೇ ನೆರೆಯ ಆಂಧ್ರಪ್ರದೇಶ ಸೇರಿದಂತೆ ದೂರದ ಊರುಗಳಿಂದ ರೈತರು ಜಾತ್ರೆಗೆ ಆಗಮಿಸಿ, ಹಸುಗಳನ್ನು ಖರೀದಿಸುತ್ತಿದ್ದಾರೆ.
ಇದನ್ನೂ ಓದಿ: ಶಾಲಾ ಮಕ್ಕಳೇ ತಯಾರಿಸುವ ಉಪಗ್ರಹಕ್ಕೆ 'ಪುನೀತ್ ರಾಜ್‌ಕುಮಾರ್' ನಾಮಕರಣ
ಸಾಮಾನ್ಯವಾಗಿ ಹಳ್ಳಿಕಾರ್ ತಳಿಯ ಕರುಗಳನ್ನು ಒಂದು ಲಕ್ಷದ ವರೆಗೂ ಮಾರಾಟ ಮಾಡಲಾಗುತ್ತದೆ. ಅಲ್ಲದೇ ಇವು ಉಳುಮೆಗೆ ಕೂಡ ಬಳಕೆಯಾಗುತ್ತವೆ. ಉತ್ಕೃಷ್ಟ ಗುಣಮಟ್ಟದ ಹಾಲನ್ನು ಕೂಡ ಕೊಡುತ್ತವೆ. ಹೀಗಾಗಿ ರೈತರು ಹಳ್ಳಿಕಾರ್ ತಳಿಯನ್ನೇ ಹೆಚ್ಚಾಗಿ ಸಾಕಲು ಬಯಸುತ್ತಾರೆ. ತುಮಕೂರು ಸುತ್ತಮುತ್ತಲ ಜಿಲ್ಲೆಗಳಲ್ಲಿರುವ ರೈತರ ಮನೆಗಳಲ್ಲಿ ಕನಿಷ್ಠ ಎರಡು ಹಳ್ಳಿಕಾರ್ ತಳಿಯ ಹಸುಗಳನ್ನು ನಾವು ಕಾಣಬಹುದು.