ತುಮಕೂರು: ಜೈನ ಧರ್ಮೀಯರ ಪವಿತ್ರ ಕ್ಷೇತ್ರ ಜಾರ್ಖಂಡ್ ರಾಜ್ಯದಲ್ಲಿರುವ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಅಲ್ಲಿನ ಸರ್ಕಾರ ಘೋಷಿಸಿರುವುದನ್ನು ಖಂಡಿಸಿ ತುಮಕೂರಿನಲ್ಲಿ ಜೈನ ಸಮುದಾಯದವರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಮಹಾವೀರ ಭವನದಿಂದ ಹೊರಟ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ಸಾಗಿ, ಶಿಖರ್ಜಿ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವಾಗಿಯೇ ಉಳಿಸಬೇಕು. ಅಲ್ಲದೇ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ದೇಶದಲ್ಲಿರುವ ಜೈನ ಸಮುದಾಯದವರ ಪವಿತ್ರ ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಂಹನಗದ್ದೆ ಕ್ಷೇತ್ರದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿ ವಹಿಸಿದ್ದರು. ಬಸ್ ಸ್ಟ್ಯಾಂಡ್ ರಸ್ತೆಯ ಮೂಲಕ ಸಾಗಿದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿ ಮಾತನಾಡಿ, ಜಾರ್ಖಂಡ್ ಸರ್ಕಾರ ಸಮ್ಮೇದ ಶಿಖರ್ಜಿ ಧಾರ್ಮಿಕ ಕ್ಷೇತ್ರವನ್ನು ಪ್ರವಾಸಿ ತಾಣವೆಂದು ಘೋಷಣೆ ಮಾಡಿದೆ. ಆ ಆದೇಶವನ್ನು ರದ್ದು ಮಾಡಬೇಕೆಂದು ಹೇಳಿ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ಜೈನರ ಅತ್ಯಂತ ಪವಿತ್ರ ಕ್ಷೇತ್ರವನ್ನು ಈಗಿನ ಸರ್ಕಾರ ದುರುದ್ದೇಶದಿಂದ ವ್ಯಾಪರೀಕರಣ ಮಾಡಲು ಹೊರಟಿದೆ. ಈ ಆದೇಶ ಜೈನ ಸಮಾಜದ ಅಸ್ಥಿತ್ವ, ನಂಬಿಕೆ, ಪವಿತ್ರತೆಗೆ ವಿರೋಧವಾಗಿದೆ ಎಂದರು.
ಇದನ್ನೂ ಓದಿ: ತುಮಕೂರು: ಕಾಂಗ್ರೆಸ್ ಕಾರ್ಯಕರ್ತರ ಸಭೆ ವೇಳೆ ಹೆಜ್ಜೇನು ದಾಳಿ, ಹಲವರಿಗೆ ಗಾಯ