ತುಮಕೂರು: ಜಿಲ್ಲೆಯಲ್ಲಿ ಹೋಂ ಐಸೋಲೇಷನ್/ಹೋಂ ಕ್ವಾರಂಟೈನಲ್ಲಿರುವ ಸೋಂಕಿತರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಬೇಕು. ಜತೆಗೆ ಸೋಂಕಿತರ ಸೋಂಕಿನ ಮೂಲವನ್ನು ಪತ್ತೆ ಹಚ್ಚಬೇಕು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವಿಕೆ, ನಿರ್ವಹಣೆ ಕುರಿತಂತೆ ಚಿಕ್ಕನಾಯಕನಹಳ್ಳಿಯ ತಾಲೂಕು ಕಚೇರಿಯ ಕೆಸ್ವಾನ್ ಮೂಲಕ ಕಂದಾಯ, ಆರೋಗ್ಯ, ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು.
ಬಂದ ದೂರುಗಳೇನು?
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕು. ಹೋಂ ಐಸೋಲೇಷನ್ ಹಾಗೂ ಹೋಂ ಕ್ವಾರಂಟೈನ್ನಲ್ಲಿರುವವರು ಎಲ್ಲೆಂದರಲ್ಲಿ ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಅವರು ಪ್ರತ್ಯೇಕವಾಗಿರಲು ಸೌಲಭ್ಯಗಳು ಇಲ್ಲದಿರಬಹುದು. ಹಾಗಾಗಿ ಹೋಂ ಐಸೋಲೇಷನ್ ಹಾಗೂ ಹೋ ಕ್ವಾರಂಟೈನ್ನಲ್ಲಿರುವವರನ್ನು ಪರೀಕ್ಷೆ ಮಾಡಿ ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು.
ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರ:
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರ ಪೈಕಿ ಸೋಂಕಿನ ಲಕ್ಷಣ ಇಲ್ಲದವರು ಮತ್ತು ಆಮ್ಲಜನಕ ಅವಶ್ಯಕತೆ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸಬೇಕು. ಕ್ವಾರಂಟೈನ್ನಲ್ಲಿದ್ದ ಸೋಂಕಿತರ ಮನೆಯವರನ್ನು ಕಡ್ಡಾಯವಾಗಿ ರ್ಯಾಪಿಡ್ ಟೆಸ್ಟ್ಗೆ ಒಳಪಡಿಸಬೇಕು ಎಂದು ತಿಳಿಸಿದರು.
ಸೋಂಕಿನ ಮೂಲ ಪತ್ತೆ ಹಚ್ಚಿ:
ಸೋಂಕಿತರಿಗೆ ಸೋಂಕು ಎಲ್ಲಿಂದ ಬಂದಿದೆ ಎಂಬ ಮೂಲವನ್ನು ಪತ್ತೆ ಹಚ್ಚಬೇಕು. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸುವ ಪ್ರಮಾಣ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರ್, ಆರೋಗ್ಯಾಧಿಕಾರಿಗಳು/ ವೈದ್ಯರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಪಂಚಾಯತ್ ರಾಜ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಅಂಗನವಾಡಿ/ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಮನೆ ಮನೆ ಸಮೀಕ್ಷೆ ನಡೆಸಿ, ಸೋಂಕಿನ ಲಕ್ಷಣ ಹೊಂದಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಒಂದು ವೇಳೆ ಸೋಂಕಿನ ಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಆಶಾ ಕಾರ್ಯಕರ್ತೆಯರು ಕೆಲಸ ನಿರ್ವಹಿಸಲು ನಿರಾಕರಿಸಿದರೆ ಅಂತಹವರಿಗೆ ನೋಟಿಸ್ ನೀಡಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಡಿಎಚ್ಒ ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.
ಇದನ್ನೂ ಓದಿ: ಆದಿಚು೦ಚನಗಿರಿ ಆಸ್ಪತ್ರೆ, ಹಾಸ್ಟೆಲ್‌ಗಳನ್ನು ಬಿಟ್ಟುಕೊಡಲು ಶ್ರೀಮಠ ಸಿದ್ಧವಿದೆ: ನಿರ್ಮಲಾನಂದ ಶ್ರೀ
ಹಾಸಿಗೆಗಳು ಸಿಗದೆ ಸೋಂಕಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಬಾರದು. ಜಿಲ್ಲೆಯಲ್ಲಿ ಲಭ್ಯವಿರುವ ಹಾಸಿಗೆಗಳು, ಐಸಿಯು, ವೆಂಟಿಲೇಟರ್ ಇವುಗಳ ಮಾಹಿತಿ ಸಂಗ್ರಹ ಕೆಲಸವನ್ನು ಡಿಎಚ್ಒ ಹಾಗೂ ಡಿಎಸ್ ಅವರು ನಿರ್ವಹಿಸಿ, ಹಾಸಿಗೆ ಲಭ್ಯತೆ ಇರುವ ಕಡೆ ಸೋಂಕಿತರನ್ನು ದಾಖಲು ಮಾಡಬೇಕು. ಹಾಸಿಗೆ ಖಾಲಿಯಿರುವ ಕಡೆ ತಾವು ರೆಫರ್ ಮಾಡುವ ಸೋಂಕಿತರನ್ನು ಖಾಸಗಿ ಆಸ್ಪತ್ರೆಗಳು ನಿರಾಕರಿಸುವಂತಿಲ್ಲ. ಒಂದು ವೇಳೆ ನಿರಾಕರಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.