ತುಮಕೂರು : ಜಿಲ್ಲೆಯ ಸಿದ್ಧಗಂಗಾ ಮಠಕ್ಕೂ ನೀರಿನ ಅಭಾವ ಎದುರಾಗುವ ಸಾಧ್ಯತೆಗಳಿವೆ. ಮಠಕ್ಕೆ ನೀರು ಪೂರೈಸುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.
ಕಳೆದ ವರ್ಷಕ್ಕೆ ಹೋಲಿಸಿದ್ರೆ ಬಿಸಿಲು ಜೋರಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗುವ ಆತಂಕ ಮೂಡಿದೆ. ಜಿಲ್ಲೆಯ ಸಿದ್ಧಗಂಗಾ ಮಠಕ್ಕೂ ಕೂಡ ನೀರಿನ ಅಭಾವ ಎದುರಾಗುವ ಸಾಧ್ಯತೆಗಳಿದೆ. ಏಪ್ರಿಲ್ ತಿಂಗಳ ಅರ್ಧದಿಂದ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ, ನೀರನ್ನು ಮಿತವಾಗಿ ಬಳಸುವಂತೆ ಮಠದ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಸೂಚಿಸಿದ್ದಾರೆ.
ಮಠಕ್ಕೆ ನೀರು ಪೂರೈಸುವ ಯೋಜನೆ ಇನ್ನೂ ಪೂರ್ಣಗೊಳ್ಳದಿರುವ ಪರಿಣಾಮ ಮಠದಲ್ಲಿ ನೀರಿನ ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದೆ. ಕೆರೆ, ಕಟ್ಟೆಗಳಲ್ಲಿ ನೀರು ಬರಿದಾಗುತ್ತಿದೆ. ಅಂತರ್ಜಲ ಪ್ರಮಾಣ ಕ್ಷೀಣಿಸುತ್ತಿದೆ. ಸದ್ಯ ಪಾಲಿಕೆಯಿಂದ ಸಿದ್ಧಗಂಗಾ ಮಠಕ್ಕೆ ನೀರು ಪೂರೈಕೆಯಾಗುತ್ತಿದ್ದರೂ ಏಪ್ರಿಲ್ ಮಧ್ಯಭಾಗದಿಂದ ನೀರಿನ ಕೊರತೆ ಉಂಟಾಗುವ ಕಳವಳ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಗಳದ್ದಾಗಿದೆ.
ಹಾಗಾಗಿ, ನೀರನ್ನು ಮಿತವಾಗಿ ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಮಠದ ನಾಲ್ಕು ಬೋರ್ವೆಲ್ ನೀರಿನ ಪ್ರಮಾಣ ದಿನೇದಿನೆ ಕಡಿಮೆಯಾಗುತ್ತಿದೆ. ಪರಿಣಾಮ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಅಂತಾರೆ ಶ್ರೀಗಳು.
ಸಿದ್ಧಗಂಗಾ ಮಠದಲ್ಲಿ ಪ್ರಸ್ತುತ 7 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ನಿತ್ಯ ಬಳಕೆಗೆ ನೀರು ಬೇಕಾಗಿದೆ. ಜತೆಗೆ ಸಾವಿರಾರು ಭಕ್ತರು ನಿತ್ಯ ಮಠಕ್ಕೆ ಭೇಟಿ ಕೊಡೋದ್ರಿಂದ ಅನ್ನದಾಸೋಹಕ್ಕೂ ಮುಂದಿನ ದಿನದಲ್ಲಿ ನೀರಿನ ಕೊರತೆ ಉಂಟಾಗುವ ಆತಂಕವನ್ನ ಶ್ರೀಗಳು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವರ್ಗಾವಣೆ: ಗೌರವ್ ಗುಪ್ತ ನೂತನ ಆಯುಕ್ತ
ಹೊನ್ನೆನಹಳ್ಳಿಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸಿ ಅಲ್ಲಿಂದ ಮಠಕ್ಕೆ ನೀರು ಪೂರೈಸುವ ಯೋಜನೆ ಪೂರ್ಣಗೊಂಡರೆ ನೀರಿನ ಸಮಸ್ಯೆ ಉಂಟಾಗುತ್ತಿರಲಿಲ್ಲ. ಗುತ್ತಿಗೆದಾರರ ಅಸಡ್ಡೆ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು.
ಸದ್ಯ ಕಾಮಗಾರಿ ಪುನಾರಂಭಗೊಂಡಿದ್ದರೂ ಬೇಗ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಆದರೂ ಜೂನ್ ವೇಳೆ ಕಾಮಗಾರಿ ಪೂರ್ಣಗೊಂಡು ಮಠಕ್ಕೆ ನೀರು ಪೂರೈಕೆಯಾಗಲಿದೆ ಎನ್ನುತ್ತಾರೆ ಶಾಸಕ ಜ್ಯೋತಿಗಣೇಶ್.