ತುಮಕೂರು: ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆದ ವೇಳೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಬ್ಯಾಂಕಿನ ಕೀ ಕೊಟ್ಟಿದ್ರೆ, ಒಂದು ವಾರದೊಳಗೆ ಬ್ಯಾಂಕಿನಲ್ಲಿದ್ದ ಎಲ್ಲಾ ಠೇವಣಿಗಳನ್ನು ಠೇವಣಿದಾರರು ಹಿಂತೆಗೆದು ಕೊಳ್ಳುತ್ತಿದ್ದರು. ಇಂದು ರೈತರಿಗೆ ಸಾಲ ಕೊಡಲು ಸಾಧ್ಯವಾಗುತ್ತಿತ್ತೆ ಎಂಬುದನ್ನು ಯೋಚಿಸಿ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೆ ಎನ್ ರಾಜಣ್ಣ ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ಪ್ರಶ್ನಿಸಿದ್ರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ 65ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕೆ ಎನ್ ರಾಜಣ್ಣನವರು, ಮತ ಹಾಕುವವರಿಗೆ ಮಾತ್ರ ಸಾಲ ನೀಡಲಿಲ್ಲ. ಎಲ್ಲಾ ವರ್ಗದ ರೈತರಿಗೂ ಸಾಲ ನೀಡಲಾಗಿದೆ. ನಮ್ಮ ದೇಶದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿ ಇರುವವರು ಯಾರು ಎಂದರೆ ರೈತರು. ಕಡಿಮೆ ಜಮೀನು ಹೊಂದಿರುವವರು ಕಡಿಮೆ ಸಾಲಗಾರರು, ಹೆಚ್ಚು ಜಮೀನು ಹೊಂದಿರುವವರು ಹೆಚ್ಚು ಸಾಲಗಾರರು. ಸಾಲ ಇಲ್ಲದೆ ಇರುವ ರೈತರು ಈ ದೇಶದಲ್ಲಿಯೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಕೆಲ ತಿಂಗಳ ಹಿಂದೆ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ನಾವೇನಾದರೂ ತೀರ್ಮಾನಿಸಿ ಜಿಲ್ಲಾಧಿಕಾರಿಗಳಿಗೆ ಬ್ಯಾಂಕ್ಗಳನ್ನು ಬೀಗ ಹಾಕಿ ಅವರಿಗೆ ಕೀ ಕೊಟ್ಟಿದ್ರೆ, ಒಂದು ವಾರದ ಒಳಗೆ ಬ್ಯಾಂಕಿನಲ್ಲಿ ಇದ್ದ ಠೇವಣಿಗಳನ್ನು ಠೇವಣಿದಾರರು ಹಿಂತೆಗೆದು ಕೊಳ್ಳುತ್ತಿದ್ದರು. ಈಗ ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತಿತ್ತೆ ಯೋಚಿಸಿ ಎಂದರು.
ಸಹಕಾರಿ ಬ್ಯಾಂಕ್ಗಳಲ್ಲಿ ಸಾಲಮನ್ನಾ ವಿಚಾರದಲ್ಲಿನ ಲೋಪಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಚರ್ಚೆ ಮಾಡಲಾಗಿದೆ. 1,400 ಕೋಟಿ ರೂಗಳನ್ನು ಘೋಷಣೆ ಮಾಡಿದ್ದಾರೆ. ಇದರಲ್ಲಿ ಯಾರಿಗೂ ತಾರತಮ್ಯ ಮಾಡದೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದರು.