ತುಮಕೂರು: ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಕೋಶ ಆಪರೇಷನ್ಗೆ ರೋಗಿಯೊಬ್ಬರಿಂದ 10ಸಾವಿರ ರೂ. ಲಂಚ ಪಡೆದಿದ್ದ ಪ್ರಸೂತಿ ತಜ್ಞೆಗೆ ಕೋರ್ಟ್ 7 ವರ್ಷ ಜೈಲು ಹಾಗೂ ನರ್ಸ್ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಡಾ. ಕೆ ಮಮತಾಗೆ ಮತ್ತು ದಾದಿ ಎಚ್.ಎಸ್. ಗಂಗಮ್ಮಗೆ ಲಂಚ ಪ್ರಕರಣದಡಿ ಕೋರ್ಟ್ ಈ ಶಿಕ್ಷೆ ವಿಧಿಸಿದೆ. 2014ರ ಸೆಪ್ಟೆಂಬರ್ 8ರಂದು ಈ ಕುರಿತಂತೆ ಪ್ರಕರಣ ದಾಖಲಾಗಿತ್ತು. 7ವರ್ಷಗಳ ನಂತರ ವಿಚಾರಣೆ ಪೂರ್ಣಗೊಳಿಸಲಾಗಿದ್ದು, 7ನೇ ಅಧಿಕ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರನಾಥ್ ತೀರ್ಪು ಪ್ರಕಟಿಸಿದ್ದಾರೆ.
ಡಾ. ಕೆ. ಮಮತಾಗೆ 7 ವರ್ಷ ಜೈಲು ಶಿಕ್ಷೆ ಜೊತೆಗೆ 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಾದಿ ಗಂಗಮ್ಮಳಿಗೆ 3 ವರ್ಷ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಸವರಾಜ್ ವಾದ ಮಂಡಿಸಿದ್ದರು.
ಏನಿದು ಪ್ರಕರಣ:
ಕುಣಿಗಲ್ ತಾಲೂಕಿನ ಜಯಮ್ಮ ಎಂಬ ಮಹಿಳೆ ಗರ್ಭಕೋಶದ ಆಪರೇಷನ್ ಮಾಡಿಸಿಕೊಳ್ಳಲು ಕುಣಿಗಲ್ ತಾಲೂಕು ಆಸ್ಪತ್ರೆಗೆ ತೆರಳಿದ್ದರು. ಅಲ್ಲಿನ ದಾದಿ ಎಚ್.ಎಸ್. ಗಂಗಮ್ಮ ಆಪರೇಷನ್ ಮಾಡಲು ಪ್ರಸೂತಿ ತಜ್ಞೆ ಡಾ. ಕೆ. ಮಮತಾಗೆ 10 ಸಾವಿರ ರೂ. ಲಂಚ ನೀಡುವಂತೆ ಒತ್ತಾಯಿಸಿದ್ದರು. ದಾದಿಯ ಬೇಡಿಕೆಯಂತೆ ಮುಂಗಡವಾಗಿ 6 ಸಾವಿರ ರೂ. ಲಂಚ ನೀಡಿದ ಬಳಿಕ ಜಯಮ್ಮ ಗರ್ಭಕೋಶದ ಆಪರೇಷನ್ ಮಾಡಿಸಿಕೊಂಡಿದ್ದರು. ಉಳಿದ 4 ಸಾವಿರ ರೂ. ಲಂಚದ ಹಣ ಕೊಟ್ಟಿಲ್ಲ ಎಂದು ಜಯಮ್ಮ ಅವರನ್ನು ಡಿಸ್ಚಾರ್ಜ್ ಮಾಡಿರಲಿಲ್ಲ. ಅಲ್ಲದೇ ದಾದಿ ಗಂಗಮ್ಮ ಜಯಮ್ಮಳ ಮಗಳಿ ಫೋನ್ ಮಾಡಿ ಉಳಿದ 4 ಸಾವಿರ ರೂ. ನೀಡುವಂತೆ ಪೀಡಿಸಿದ್ದಳು.
ಉಳಿದ ಹಣಕ್ಕಾಗಿ ಹಸು ಮಾರಿದ್ದ ಮಹಿಳೆ
ಇದ್ರಿಂದ ಬೇಸತ್ತ ಜಯಮ್ಮಳ ಅಣ್ಣನ ಮನೆಯಲ್ಲಿದ್ದ ಹಸುವನ್ನು ಮಾರಾಟ ಮಾಡಿ ಅದ್ರಿಂದ ಬಂದ ಹಣವನ್ನು ಪ್ರಸೂತಿ ತಜ್ಞೆ ಡಾ. ಮಮತಾಗೆ ನೀಡಿದ್ದರು. ಜಯಮ್ಮ ಬಡವರಾಗಿದ್ದು, ಲಂಚದ ಹಣ ನೀಡಲು ಜೀವನೋಪಾಯಕ್ಕಾಗಿ ಇದ್ದ ಹಸುವನ್ನೇ ಮಾರಾಟ ಮಾಡಿದ್ದರು.
ಮೊದಲಿಗೆ 6 ಸಾವಿರ ಮುಂಗಡ ನೀಡಿದ್ದ ಜಯಮ್ಮಳಿಗೆ, ಬಾಕಿ ಹಣಕ್ಕೆ ದಾದಿ ಒತ್ತಾಯ ಮಾಡಿದಾಗ ಲೋಕಾಯುಕ್ತರಿಗೆ ದೂರು ಕೊಡಲು ನಿರ್ಧರಿಸಿದ್ದರು. ಅದರಂತೆ ಬಾಕಿ ಹಣ ಕೊಡುವ ಮೊದಲು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಆಸ್ಪತ್ರೆಯಲ್ಲಿ ಆಪರೇಷನ್ ಕೊಠಡಿಯ ಬಾಗಿಲಲ್ಲೇ ಬಾಕಿ 4 ಸಾವಿರ ಲಂಚ ಪಡೆಯುವಾಗ ಡಾ. ಕೆ ಮಮತಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಡಾ. ಮಮತಾ ಪ್ರಸ್ತುತ ರಾಮನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.