ತುಮಕೂರು: ಸಚಿವ ಸಂಪುಟದಲ್ಲಿ ನಾನೊಬ್ಬಳೇ ಮಹಿಳಾ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮರ್ಪಕವಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಹೈಕಮಾಂಡ್ನಿಂದ ಯಾವುದೇ ಸೂಚನೆ ಬಂದರೂ ಅದಕ್ಕೆ ನಾನು ಸಿದ್ಧ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಧುಗಿರಿ ತಾಲೂಕಿನ ಮೈದನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು, ದೈಹಿಕ ಹಲ್ಲೆಗೆ ಒಳಗಾಗಿದ್ದ ಅಪ್ರಾಪ್ತ ಬಾಲಕಿಯನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದ್ದೇನೆ. ಆಕೆಯ ತಂದೆ-ತಾಯಿಯನ್ನು ಭೇಟಿ ಮಾಡಿ ಧೈರ್ಯ ತುಂಬುವ ಕಾರ್ಯ ಮಾಡಿದ್ದೇನೆ ಎಂದರು.
ಅಪ್ರಾಪ್ತೆಯ ತಂದೆ ಲಿಖಿತವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಸಮಿತಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಪ್ರಾಪ್ತೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಕಾನೂನಿನ ಮೂಲಕ ಕಠಿಣ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವೇಳೆ ನಿಮ್ಮ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧವಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನವನ್ನು ಏಕೆ ತ್ಯಾಗ ಮಾಡಬೇಕು? ನಾನೊಬ್ಬಳೇ ಮಹಿಳಾ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಾಕಷ್ಟು ಸಂಘಟನೆಗಳ ಮುಖಾಂತರ ಗುರುತಿಸಿಕೊಂಡು ಈಗ ಸಚಿವ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಇಲ್ಲಿಯವರೆಗೂ ಸಹ ಹೈಕಮಾಂಡ್ನಿಂದ ಯಾವುದೇ ರೀತಿಯಲ್ಲಿಯೂ ಸಚಿವ ಸ್ಥಾನ ತ್ಯಾಗ ಮಾಡುವ ಬಗ್ಗೆ ಸೂಚನೆ ಬಂದಿಲ್ಲ. ಅಲ್ಲದೆ ನಾನೊಬ್ಬಳೇ ಮಹಿಳಾ ಮಂತ್ರಿಯಾಗಿದ್ದೇನೆ. ಸಮರ್ಪಕವಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಹೈಕಮಾಂಡ್ನಿಂದ ಯಾವುದೇ ಸೂಚನೆ ಬಂದರೂ ಅದಕ್ಕೆ ನಾನು ಸಿದ್ಧ ಎಂದರು.