ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಖಾಲಿ ಮತಪತ್ರ ಹಾಕಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುವೆ ಎಂದು ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವ ಪ್ರಾಮುಖ್ಯತೆ ಬಗ್ಗೆ ಗೊತ್ತಿದೆ ಎಂದರು.
ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಆದರೆ, ಖಾಲಿ ಮತ ಮತಪತ್ರ ಹಾಕಿದ್ದಾನೆಂದು ಯಾಕೆ ಅಪಾದನೆ ಮಾಡಿದ್ದಾರೋ ಗೊತ್ತಿಲ್ಲ. ಸಂಜೆಯ ವೇಳೆಗೆ ಸತ್ಯಾಂಶ ಗೊತ್ತಾಗಲಿದೆ. ಖಾಲಿ ಮತಪತ್ರ ಇತ್ತೆಂದರೆ ನಾನು ಅಸಮರ್ಥ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿಯಲು ಯೋಗ್ಯತೆ ಇಲ್ಲದ ವ್ಯಕ್ತಿ ಎಂದು ಹೇಳಲಿ. ನಾನು ರಾಜ್ಯದ ಜನರ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ನಾನು ಮತ ಹಾಕಿ ಅವರಿಗೆ (ಹೆ.ಚ್.ಡಿ.ಕುಮಾರಸ್ವಾಮಿ) ತೋರಿಸಿ ಬಂದಿದ್ದೇನೆ. ಆದರೂ ಯಾಕೆ ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ. ನನ್ನ ಮೇಲೆ ದ್ವೇಷ ಇರುವ ಕಾರಣಕ್ಕೆ ಮತ್ತೊಬ್ಬ ಅಭ್ಯರ್ಥಿಯನ್ನು ಗುಬ್ಬಿಗೆ ತಂದು ಹಾಕಿದ್ದಾರೆ. ನಾನು ಇಲ್ಲೇ ಇರ್ತೀನಿ ಅಂತಾ ಹೇಳಿದರೂ ಕೂಡ ಅವರು ಪಕ್ಷದಲ್ಲಿ ಇರಿಸಿಕೊಳ್ಳಲು ತಯಾರಿಲ್ಲ. ನಾನು ಅವರ ಮನೆಗೆ ಸೀಮಂತಕ್ಕೆ ಹೋದೆ, ಅಲ್ಲಿ ಹೋದರೂ ಮಾತನಾಡಿಸಿಲ್ಲ. ಕಾರ್ಯಾಗಾರಕ್ಕೆ ಹೋದರೂ ಮಾತನಾಡಿಸಿಲ್ಲ. ಇಲ್ಲಿಗೆ ಬಂದು ಸೀಮಂತಕ್ಕೆ ನಾನೇನು ಕರೆದಿದ್ನಾ? ಎಂದಿದ್ದರು. ಅಷ್ಟೋಂದು ದ್ವೇಷ ಇದೆ. ಹೀಗಿರುವಾಗ ನನಗೆ ಹೇಗೆ ಒಳ್ಳೆಯದು ಬಯಸುತ್ತಾರೆ ಎಂದು ತಿಳಿದುಕೊಂಡರೆ ನನ್ನಂತ ಮೂರ್ಖ ಇನ್ನೊಬ್ಬ ಇಲ್ಲ ಎಂದು ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ನಾನು ಆತ್ಮಸಾಕ್ಷಿ ಮತ ಹಾಕಿದ್ದೇನೆ. ಬಿ-ಫಾರಂ ಕೊಟ್ಟಿದ್ದಾರೆ. ಅವರ ಅವಧಿ ಮುಗಿಯೋವರೆಗೂ ಆ ಪಕ್ಷಕ್ಕೆ ದ್ರೋಹ ಮಾಡಬಾರದೆಂದು ತಿಳಿದುಕೊಂಡಿದ್ದೇನೆ. ನನಗೆ ರಾಜಕೀಯದಲ್ಲಿ ಅಧಿಕಾರ, ಹಣ ಮುಖ್ಯವಾಗಿದ್ದರೆ ಸಚಿವನಾಗಿರುತ್ತಿದ್ದೆ. ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆದಾಗಲೇ ಸಚಿವರಾಗುತ್ತಿದ್ದೆ. ಆದರೆ, ಕುಮಾರಸ್ವಾಮಿ ನನಗೇ ಮಾನ ಮಾರ್ಯಾದೆ ಇಲ್ಲ ಅಂತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಜೆಡಿಎಸ್ಗೆ ಡಬಲ್ ಶಾಕ್: ಖಾಲಿ ಮತ ಪತ್ರ ಹಾಕಿದ ಗುಬ್ಬಿ ಶ್ರೀನಿವಾಸ್!