ತುಮಕೂರು: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದರೆ ಯಡಿಯೂರಪ್ಪ ಅವರ 150 ಅಡಿಗೂ ಎತ್ತರದ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ.
ತುಮಕೂರಿನಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿ, ಗುಜರಾತ್ನಲ್ಲಿ ಪಟೇಲರ ಪ್ರತಿಮೆ 360 ಅಡಿ ಎತ್ತರ ಇದೆ, ರಾಜ್ಯದಲ್ಲಿ ಯಡಿಯೂರಪ್ಪರದ್ದು ಕನಿಷ್ಠ 150 ಅಡಿಗೂ ಹೆಚ್ಚು ಎತ್ತರದ ಪ್ರತಿಮೆ ನಿರ್ಮಾಣವಾಗಲಿದೆ. ನೇತ್ರಾವತಿ, ಕುಮಾರಧಾರ ಸಂಗಮವಾಗುವ ಜಾಗದಲ್ಲಿ ಅಣೆಕಟ್ಟು ಕಟ್ಟಿ 200 ಟಿಎಂಸಿ ನೀರು ತರುವ ಮೆಗಾ ಪ್ಲಾನ್ ಮಾಡಲಾಗುತ್ತಿದೆ. ಅದೇ ರೀತಿ ಉತ್ತರ ಕರ್ನಾಟಕ್ಕೆ ಅಘನಾಶಿನಿ, ಬೇಡ್ತಿ ನದಿಗಳ 130 ಟಿಎಂಸಿ ನೀರು ಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ 36 ಸಾವಿರ ಕೆರೆಗಳು ತುಂಬಿಸಬಹುದಾಗಿದೆ. ಇಷ್ಟನ್ನು ಮಾಡಿದರೆ ರೈತ ಇನ್ನು 50 ವರ್ಷಗಳ ಕಾಲ ಆರಮವಾಗಿ ಬದುಕುತ್ತಾನೆ ಎಂದರು.
ಎತ್ತಿನ ಹೊಳೆ ಯೋಜನೆಗೆ ಕುಮಾರಧಾರ ನದಿಯ 6.5 ಟಿಎಂಸಿ ನೀರು ಕೊಡಿಸುವ ಪ್ರಯತ್ನ ಮಾಡಬೇಕು. ಈ ಎಲ್ಲಾ ಕಾರ್ಯಕ್ರಮಗಳನ್ನು ಸಿಎಂ ಯಶಸ್ವಿಯಾಗಿ ಮಾಡಬೇಕು ಎಂದರು.