ತುಮಕೂರು: ಮಹಾನಗರ ಪಾಲಿಕೆ ಪೌರಾಯುಕ್ತರಾಗಿದ್ದ ಐಎಎಸ್ ಅಧಿಕಾರಿ ಟಿ.ಭೂಬಾಲನ್ ಅವರನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ. ಈ ವರ್ಗಾವಣೆಗೆ ಜಿಲ್ಲೆಯ ಜನತೆ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇನ್ನೊಂದೆಡೆ ತುಮಕೂರು ಶಾಸಕ ಜ್ಯೋತಿಗಣೇಶ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವರ್ಗಾವಣೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಟಿ.ಭೂಬಾಲನ್ ಅವರನ್ನು ಬೆಳಗಾವಿಯ ಮಲಪ್ರಭಾ-ಘಟಪ್ರಭಾ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಪಾಲಿಕೆ ಪೌರಾಯುಕ್ತರಾಗಿದ್ದ ಸಂದರ್ಭದಲ್ಲಿ ಅವರಿಗೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಲು ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂಬ ಚಿಂತನೆ ನಡೆಸಿದ್ದ ಅವರು ಕಾಮಗಾರಿ ವಿಳಂಬ ಮಾಡಿದ ಗುತ್ತಿಗೆದಾರರಿಗೆ ಬರೊಬ್ಬರಿ 64 ಲಕ್ಷ ರೂ ದಂಡ ವಿಧಿಸಿದ್ದರು. ಹದಗೆಟ್ಟು ಹೋಗಿದ್ದ ಶುದ್ಧ ನೀರಿನ ಘಟಕಗಳನ್ನು ಸರಿಪಡಿಸಿದ್ದರು. ಇದೆಲ್ಲವೂ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿಗಳಿಗೆ ಹಾಗೂ ಅಮಿತ್ ಶಾ ಅವರಿಗೆ ಪತ್ರವನ್ನು ರವಾನಿಸುವ ಮೂಲಕ ಟಿ.ಭೂಬಾಲನ್ ವರ್ಗಾವಣೆಗೆ ವಿರೋಧ ವ್ಯಕ್ತವಾಗಿದೆ.
ಇದಲ್ಲದೆ ಟಿ.ಭೂಬಾಲನ್ ಅವರು ತುಮಕೂರು ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಪ್ರಯತ್ನದಲ್ಲಿ ಬಹುತೇಕ ಸಫಲರಾಗಿದ್ದರು. ಸಾರ್ವಜನಿಕರಿಂದ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವರ್ಗಾವಣೆ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.