ತುಮಕೂರು: ಕೋವಿಡ್-19 ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ವೇಳೆ ಕೊರೊನಾದಿಂದ ಅನೇಕ ವೈದ್ಯರು ಮೃತಪಟ್ಟಿದ್ದು, ಸರ್ಕಾರದಿಂದ ಇಲ್ಲಿಯವರೆಗೂ ಅವರಿಗೆ ಅಥವಾ ಅವರ ಕುಟುಂಬದವರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಹಾಗೂ ಗುತ್ತಿಗೆ ಹೊರಗುತ್ತಿಗೆ ಎಂಬ ರೀತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಮಾಧ್ಯಮ ಕಾರ್ಯದರ್ಶಿ ಎಸ್.ವಿ ಹುಚ್ಚೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜಿಲ್ಲಾಸ್ಪತ್ರೆಯ ಮುಂಭಾಗ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಯಿತು.
ರಾಜ್ಯ ಸರ್ಕಾರದ ಆರೋಗ್ಯ ಕ್ಷೇತ್ರದ ಬಜೆಟ್ ಶೇಕಡವಾರು ಹೆಚ್ಚಿಸಬೇಕು. ಈ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುವ ಜೊತೆಗೆ ಅಗತ್ಯವಿರುವ ನೆರವನ್ನು ಕೇಂದ್ರ ಸರ್ಕಾರವು ಒದಗಿಸಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಅಭಿವೃದ್ಧಿಗೆ ಆದ್ಯತೆ ನೀಡಲು ಕ್ರಮ ಜರುಗಿಸಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಿ, ಖಾಯಂ ಮಾಡಬೇಕು, ಎಲ್ಲ ಹುದ್ದೆಗಳಿಗೆ ವೇತನ ಭತ್ಯೆ ಮತ್ತು ವೇತನ ಶ್ರೇಣಿಯನ್ನು ನೀಡುವ ಮೂಲಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹರಿಯಾಣ ಸರ್ಕಾರ ವೈದ್ಯಕೀಯ ಶಿಕ್ಷಣ ಇಲಾಖೆಯು ಜಾರಿ ಮಾಡಿರುವ ಏಕರೂಪ ವೇತನದ ಮಾದರಿಯಲ್ಲಿ, ನಮ್ಮ ರಾಜ್ಯದ ಎಲ್ಲಾ ನೌಕರರಿಗೂ ಜಾರಿಮಾಡಲು ಕ್ರಮ ವಹಿಸಬೇಕು. ಎನ್ ಹೆಚ್ ಎಂ ಅಡಿ ಕೆಲಸ ಮಾಡುವ ನೌಕರರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಬೋನಸ್ ಹೆಚ್ಚಳವನ್ನು ಕಾರ್ಯಗತಗೊಳಿಸಬೇಕು, ಆರೋಗ್ಯ ಭಾಗ್ಯ ಯೋಜನೆಯನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕಲ್ಯಾಣ ನಿಧಿ ಅಥವಾ ಕಲ್ಯಾಣ ಮಂಡಳಿ ಸ್ಥಾಪಿಸಲು ಕ್ರಮ ಜರುಗಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಮಾಧ್ಯಮ ಕಾರ್ಯದರ್ಶಿ ಎಸ್.ವಿ ಹುಚ್ಚೇಗೌಡ, ಸರ್ಕಾರಿ ನೌಕರರು ಹಾಗೂ ಗುತ್ತಿಗೆ ನೌಕರರು ಮಾಡುವ ಕಾರ್ಯ ಒಂದೇ ಆದರೂ, ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಹಾಗಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಮಾಡಬೇಕು. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಕೋವಿಡ್-19 ತಡೆಯುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಕೊರೊನಾದಿಂದ ಮೃತಪಟ್ಟಿದ್ದು, ಸರ್ಕಾರದಿಂದ ಇಲ್ಲಿಯವರೆಗೂ ಮೃತಪಟ್ಟ ವೈದ್ಯರಿಗೆ ಅಥವಾ ಅವರ ಕುಟುಂಬದವರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಜೊತೆಗೆ ಗುತ್ತಿಗೆ ಹೊರಗುತ್ತಿಗೆ ಎಂಬ ರೀತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.