ತುಮಕೂರು: ಹಿಜಾಬ್ ಮತ್ತು ಕೇಸರಿ ವಿವಾದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಪ್ರತಿನಿಧಿಸುವ ತಿಪಟೂರು ಕ್ಷೇತ್ರಕ್ಕೂ ಕಾಲಿಟ್ಟಿದೆ. ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದ ಉಭಯ ಕೋಮಿನ ನೂರಾರು ವಿದ್ಯಾರ್ಥಿಗಳು ನಗರದ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳನ್ನು ಗೇಟ್ ಬಳಿಯೇ ತಡೆದು ಪ್ರವೇಶಕ್ಕೆ ನಿರಾಕರಿಸಿದರು. ಒಂದು ಹಂತದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪರವಾಗಿ ಬಂದಿದ್ದ ಕೆಲವರು ಕಾಲೇಜಿನ ಸಿಬ್ಬಂದಿಯ ಜೊತೆ ಮಾತಿನ ಚಕಮಕಿ ನಡೆಸಿದ್ದು ಕಂಡು ಬಂದಿತು.
ಯಾರೇ ಆಗಲಿ, ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳಿಗೆ ನಾವು ಕಾಲೇಜಿನ ಒಳಗೆ ಬಿಡುವುದಿಲ್ಲ. ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಅದನ್ನು ಗೌರವಿಸಬೇಕು ಎಂದು ಕಾಲೇಜಿನ ಸಿಬ್ಬಂದಿ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಹಿಜಾಬ್ ವಿವಾದದ ನಾಲ್ಕೂ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್
ಇದರಿಂದ ಉಭಯ ಕೋಮಿನ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಿದ್ದು ಕಾಲೇಜಿನ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಾಲೇಜಿನ ಮುಂದೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.