ತುಮಕೂರು: ಶಿರಾ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ್ದ ಆಶ್ವಾಸನೆಯಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲಾಗಿದೆ. ಸತತ 40 ದಿನಗಳ ನಂತರ ಕಳ್ಳಂಬೆಳ್ಳ ಕೆರೆ ಮೂಲಕ ಹರಿಯುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ ಎನ್ನಲಾಗ್ತಿದೆ.
ಶಿರಾ ಉಪಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಕಳೆದ ನ.30 ರಂದು ನೀರು ಹರಿಸಲು ಆದೇಶ ನೀಡಿದ್ದರು. ಆದರೆ ಜನವರಿ 10ರವರೆಗೆ ಹರಿದ ಹೇಮಾವತಿ ನೀರು, ಭಾನುವಾರದಿಂದ ನಾಲೆಯಲ್ಲಿ ಹರಿಯುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಓದಿ:ತುಮಕೂರಿಗೆ ಹೇಮಾವತಿ ನದಿ ನೀರು ತರುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿಫಲ: ಟಿ.ಬಿ ಜಯಚಂದ್ರ
ಸದ್ಯ ಮದಲೂರು ಕೆರೆಗೆ ನೀರು ಹರಿಯುವ ವಿಚಾರದಲ್ಲಿ ಸಾಮಾಜಿಕ ಜಾಲಗಳಲ್ಲಿ ಬಾರಿ ಚರ್ಚೆ ಆರಂಭವಾಗಿದೆ. ಕೆರೆ ತುಂಬಲು ಸಾಕಷ್ಟು ನೀರು ಹರಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ಇತ್ತ ನೀರಾವರಿ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದರ ವಿರುದ್ಧ ಹಾಗೂ ನೂತನ ಶಾಸಕರ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿವೆ.