ತುಮಕೂರು: ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆ ಇಲ್ಲದಿದ್ದರೂ ಈ ಬಾರಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಕೆರೆ ತುಂಬಿಸುವ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ.
ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ತಾಲೂಕಿನ ಬೃಹತ್ ಮದಲೂರು ಕೆರೆಗೆ ನೀರು ಹರಿಸುವ ಭರವಸೆ ನೀಡಿದ್ದ ಬಿಜೆಪಿ ಸದ್ಯ ಅದನ್ನು ಈಡೇರಿಸುತ್ತಿದೆ. ಮತ್ತೊಂದೆಡೆ ಹಾಸನ ಜಿಲ್ಲೆ ಗೋರೂರಿನ ಹೇಮಾವತಿ ಜಲಾಶಯಕ್ಕೆ ನಿರೀಕ್ಷೆಗೂ ಮೀರಿ ನೀರು ಹರಿದು ಬಂದಿರುವುದು ಈ ಬಾರಿ ಮದಲೂರು ಕೆರೆಗೆ ನೀರು ತೆಗೆದುಕೊಂಡು ಹೋಗಲು ಸಹಕಾರಿಯಾಗಿದೆ.
ಮದಲೂರು ಕೆರೆಗೆ ಹೇಮಾವತಿ ನೀರಿನ ಹಂಚಿಕೆ ಇಲ್ಲದಿದ್ದರೂ ಈ ಬಾರಿ ಜಲಾಶಯಕ್ಕೆ ಹೆಚ್ಚುವರಿ ನೀರು ಬಂದಿರುವುದರಿಂದ ಕೆರೆಗೆ ನೀರು ಹರಿಸಲಾಗುತ್ತಿದೆ. ಮುಖ್ಯವಾಗಿ ಶಿರಾ ಪಟ್ಟಣದ ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರನ್ನು ಹರಿಸಿಕೊಂಡು, ಕೆರೆಯಲ್ಲಿ ನಿಗದಿಗಿಂತ 1 ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಅದನ್ನು ಮದಲೂರು ಕೆರೆಗೆ ತೆಗೆದುಕೊಂಡು ಹೋಗಲಾಗುತ್ತಿದೆ.
ಇದನ್ನೂ ಓದಿ: ಗ್ರಾ.ಪಂ ಸದಸ್ಯತ್ವ ಮಾರಾಟ ಮಾಡಿದರೆ ಕ್ರಮ: ತುಮಕೂರು ಡಿಸಿ ಎಚ್ಚರಿಕೆ
ಚಾನಲ್ಗಳ ಸಮೀಪ ನಡೆದಿರುವಂತಹ ಕಾಮಗಾರಿಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 58 ಕೋಟಿ ರೂ.ಗಳ ಕಾಮಗಾರಿ ನಡೆದಿದೆ. ಈಗಾಗಲೇ ಹೇಮಾವತಿ ನೀರು ನಿರೀಕ್ಷೆಯಂತೆ ಮದಲೂರು ಕೆರೆಗೆ ಹರಿದು ಬಂದಿದೆ.
ನವೆಂಬರ್ 30ರಂದು ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಮದಲೂರು ಕೆರೆ ತುಂಬಿಸುವ ಕುರಿತಂತೆ ನೀರಾವರಿ ಇಲಾಖೆ ಅಧಿಕಾರಿಗಳು, ಹೇಮಾವತಿ ಜಲಾಶಯ ಅಧಿಕಾರಿಗಳು ತೀರ್ಮಾನಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.