ತುಮಕೂರು: ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ.. ಹೀಗೆ ಯಾವುದೇ ರೋಗ ಲಕ್ಷಣ ಕಂಡು ಬಂದರೂ ತಕ್ಷಣ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಿ. ಕೊರೊನಾ ದೃಢಪಟ್ಟರೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ನಾಗೇಂದ್ರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಮರಣ ಹೊಂದಿದ ಪ್ರಕರಣಗಳೆಲ್ಲವೂ ತಡವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಫಲಿಸದೇ ಮೃತಪಟ್ಟವಾಗಿವೆ. ಯಾವುದೇ ರೋಗದ ಲಕ್ಷಣ ಕಾಣಿಸಿಕೊಂಡರೂ ನಿರ್ಲಕ್ಷ್ಯವಹಿಸಬೇಡಿ. ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬಂದರೆ ಕಷ್ಟವಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.
15 ದಿನಗಳಿಂದ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಬದಲಾಯಿಸಿ, 200 ಹಾಸಿಗೆಗಳ ವ್ಯವಸ್ಥೆ, 100 ಹಾಸಿಗೆಗಳ ಐಸಿಯು ವ್ಯವಸ್ಥೆ, ಜೊತೆಗೆ 30 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಕ್ಯಾತಸಂದ್ರದಲ್ಲಿ ಕೊರೊನಾ ಕೇರ್ ಸೆಂಟರ್ ತೆರೆಯಲಾಗಿದೆ ಎಂದರು.
ನಿನ್ನೆ ತುಮಕೂರು ನಗರದಲ್ಲಿ 69 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 28 ಪ್ರಕರಣಗಳು ಕೆಎಸ್ಆರ್ಪಿ ಸಿಬ್ಬಂದಿ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ಕಂಟೇನ್ಮೆಂಟ್ ಝೋನ್ ಮತ್ತು ಸೀಲ್ಡೌನ್ ಪ್ರದೇಶಗಳಲ್ಲಿ ಅನವಶ್ಯಕವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಂಜಾಗ್ರತಾ ಕ್ರಮವಾಗಿ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗೆ ರೋಗಿಯ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಅದನ್ನು ಕೆಲವರು ದುರುಪಯೋಗಪಡಿಸಿಕೊಂಡು ಜಾಲತಾಣಗಳಲ್ಲಿ ರೋಗಿಯ ಹೆಸರು, ವಿವರವನ್ನು ಪೋಸ್ಟ್ ಮಾಡಲಾಗುತ್ತಿದೆ. ಇದರಿಂದ ರೋಗಿ ಮಾನಸಿಕವಾಗಿ ಕುಗ್ಗುವುದಲ್ಲದೇ, ಆತ್ಮಹತ್ಯೆಯ ಹಾದಿ ತುಳಿಯುವ ಪರಿಸ್ಥಿತಿ ಉಂಟಾಗುತ್ತದೆ. ಈ ರೀತಿಯ ಕಾರ್ಯವನ್ನು ಯಾರೂ ಮಾಡಬಾರದು ಎಂದು ಸಲಹೆ ನೀಡಿದರು.