ನೆಲಮಂಗಲ : ಮಾಜಿ ಪ್ರಧಾನಿ ದೇವೇಗೌಡರ ಕಿರಿಯ ಪುತ್ರ ಹೆಚ್. ಡಿ. ರಮೇಶ್, ತುಮಕೂರು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅವರು ಅಪ್ಪನ ಪರ ಮತಯಾಚಿಸಿ, ಗೆಲುವಿಗೆ ಸಹಕರಿಸುವಂತೆ ಮತದಾರರನ್ನು ಕೋರಿದರು.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಕಿರಿಯ ಪುತ್ರ ಹೆಚ್. ಡಿ. ರಮೇಶ್ ಬೆಂಗಳೂರಿನಿಂದ ತುಮಕೂರಿಗೆ ತೆರಳುವಾಗ ನೆಲಮಂಗಲ ತಾಲೂಕಿನ ಎಡೇಹಳ್ಳಿಯ ಕಾರ್ಯಕರ್ತ ಹಾಗೂ ಹೋಬಳಿ ಕಾರ್ಯದರ್ಶಿ ತೀರ್ಥ ಪ್ರಸಾದ್ ಮನೆಗೆ ಭೇಟಿ ನೀಡಿದ್ರು. ಬಳಿಕ ಜೆಡಿಎಸ್ ಕಾರ್ಯಕರ್ತರ ಜೊತೆಯಲ್ಲಿ ಅಲ್ಲಿಯೇ ಉಪಹಾರ ಸೇವಿಸಿದರು. ಈ ವೇಳೆಯಲ್ಲಿ ಹಲವಾರು ಜೆಡಿಎಸ್ ಕಾರ್ಯಕರ್ತರು ರಮೇಶ್ ಅವರಿಗೆ ಸಾಥ್ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ತಂದೆ ಮಾಜಿ ಪ್ರಧಾನಿ ದೇವೇಗೌಡರ ಪರ ಮತ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಸಕ್ರಿಯ ರಾಜಕಾರಣದಿಂದ ದೂರವಿರುವ ನಾನು ಸಾಮಾನ್ಯ ಜೆಡಿಎಸ್ ಕಾರ್ಯಕರ್ತನೂ ಅಲ್ಲ. ರಾಜ್ಯ ರಾಜಕೀಯದ ಬಗ್ಗೆ ಮಾತನಾಡುವ ಶಕ್ತಿ ನನಗಿಲ್ಲ. ಕುಟುಂಬದ ಸದಸ್ಯನಾಗಿ ಕಾರ್ಯಕರ್ತರ ಜೊತೆ ತೆರಳಿ ತಂದೆಯ ಪರವಾಗಿ ಮತ ಕೇಳುತ್ತಿದ್ದೇನೆ. ತುಮಕೂರಿನಲ್ಲಿ ಹಲವಾರು ನಾಯಕರ ಮನೆಗೆ ತೆರಳಿ ಬೆಂಬಲ ಕೋರಲಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಉಪಾಧ್ಯಕ್ಷ ಬಿ.ಎಂ.ಶ್ರೀನಿವಾಸ್ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ವೀರಪ್ಪಮೊಯ್ಲಿ ಗೆಲುವು ನಿಶ್ಚಿತ. ಕಳೆದ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಕ್ಕೆ ಸುಮಾರು 8 ಲಕ್ಷ ಮತಗಳು ಬಿದ್ದಿದ್ದವು. ಈ ಬಾರಿ ಒಂದು ಲಕ್ಷ ಕಡಿಮೆಯಾದರೂ ನಮ್ಮ ಅಭ್ಯರ್ಥಿ ಜಯಭೇರಿ ಬಾರಿಸುತ್ತಾರೆ ಎಂದರು.