ಶಿವಮೊಗ್ಗ: ರೈಸ್ ಮಿಲ್ನ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಮಿಲ್ ಒಳಗಿದ್ದ 7 ಹಾಗೂ ಹೊರಗಡೆ ಪಂಚರ್ ಅಂಗಡಿ ಹಾಕಿಕೊಂಡಿದ್ದ ಓರ್ವ ಸೇರಿದಂತೆ ಒಟ್ಟು 8 ಮಂದಿ ಗಾಯಗೊಂಡ ಘಟನೆ ಭದ್ರಾವತಿಯ ಚನ್ನಗಿರಿ ರಸ್ತೆಯ ಗಣೇಶ್ ರೈಸ್ ಮಿಲ್ನಲ್ಲಿ ನಡೆದಿದೆ. ಗುರುವಾರ ಸಂಜೆ ಸುಮಾರು 6:30ಕ್ಕೆ ರೈಸ್ ಮಿಲ್ ಒಳಗಿನ ಬಾಯ್ಲರ್ ಬ್ಲಾಸ್ಟ್ ಆಗಿದ್ದು, ಸ್ಫೋಟದಿಂದ ರೈಸ್ ಮಿಲ್ ಭಾಗಶಃ ನೆಲಸಮವಾಗಿದೆ.
ಸ್ಫೋಟದ ತೀವ್ರತೆ ಎಷ್ಟಿತ್ತಿದ್ದಂತೆ, ಸ್ಫೋಟವಾದ ರೈಸ್ ಮಿಲ್ನ ಇಟ್ಟಿಗೆಗಳು ರಸ್ತೆಯಲ್ಲಿ ಓಡಾಡುವವರಿಗೆ ಹಾಗೂ ಅಂಗಡಿಗಳಿಗೂ ತಾಗಿವೆ. 7 ಜನರ ಪೈಕಿ ರಘು ಎಂಬಾತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ರಸ್ತೆ ಪಕ್ಕದ ಪಂಚರ್ ಅಂಗಡಿಯವರು ಸಹ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ. ಮೆಗ್ಗಾನ್ ಆಸ್ಪತ್ರೆಗೆ ಐದು ಜನರು, ಇನ್ನಿಬ್ಬರು ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಹ್ಮದ್ ಬಿಲಾಲ್, ಫಯಾಜ್ ಅಹಮದ್, ರಾಜಪ್ಪ, ಜಾಕೀರ್ ಹುಸೇನ್ ಗಾಯಗೊಂಡವರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಫೋಟದಿಂದ ಈ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ರಸ್ತೆಯ ಮೇಲೆಲ್ಲ ಇಟ್ಟಿಗೆಗಳು ಬಿದ್ದಿವೆ. ಸ್ಫೋಟದಿಂದ ಪಕ್ಕದ ಎರಡು ಮನೆಗಳಿಗೆ ಹಾನಿಯಾಗಿದೆ. ಸದ್ಯ ರೈಸ್ ಮಿಲ್ ಆವರಣವು ಧೂಳಿನಿಂದ ತುಂಬಿದೆ.
''ಸಂಜೆ 6:30ಕ್ಕೆ ನಮ್ಮ ಕೆಲಸ ಮುಗಿದು ಮನೆಗೆ ಹೋಗುವಾಗ ಲೆಕ್ಕ ಕೊಡಬೇಕು ಎನ್ನುವಷ್ಟರಲ್ಲಿ ಬಾಯ್ಲರ್ ಸ್ಫೋಟವಾಯಿತು. ಅದು ಹೇಗಾಯಿದೆಂದು ಗೊತ್ತಿಲ್ಲ. ನಾವು ಲಾರಿ ಪಕ್ಕದಲ್ಲಿದ್ದ ಕಾರಣ ನನಗೆ ಹೆಚ್ಚಿನ ಪೆಟ್ಟು ಬಿದ್ದಿಲ್ಲ. ಆದರೂ ಕಬ್ಬಿಣದ ತುಂಡು ಬಂದು ನನ್ನು ಬಲ ಎದೆಗೆ ತಾಗಿದೆ. ಕಬ್ಬಿಣ ತುಂಡು ಬಂದು ಹೊಡೆದ ಪರಿಣಾಮ ನಾನು ಚೀಲದ ಪೆಂಡಿ ಒಳಗೆ ಸೇರಿಕೊಂಡಿದ್ದೆ. ಸ್ವಲ್ಪ ಸುಧಾರಿಸಿಕೊಂಡು ಹೊರ ಬಂದೆ'' ಎಂದು ಮಿಲ್ನಲ್ಲಿ ಚೀಲವನ್ನು ಹೋಲಿಯುವ ಫೈಯಾಜ್ ಅಹಮದ್ ಎಂಬುವರು ಸ್ಫೋಟದ ಕುರಿತು ವಿವರಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ಸದ್ಯ ರೈಸ್ ಮಿಲ್ನಲ್ಲಿ 7 ಜನ ಇದ್ದು, ಎಲ್ಲರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಘು ಎಂಬಾತ ಮಿಸ್ಸಿಂಗ್ ಆಗಿದ್ದು, ಆತನ ಹುಡುಕಾಟ ನಡೆಸಲಾಗುತ್ತಿದೆ. ಜೆಸಿಬಿಯಿಂದ ಹುಡುಕಾಟ ನಡೆಸಲಾಗುತ್ತಿದೆ. ಪೊಲೀಸರು ಹಾಗೂ ಅಗ್ನಿ ಶಾಮಕದಳದವರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಥಣಿಯಲ್ಲಿ ಕಾರ್ಖಾನೆ ಬಾಯ್ಲರ್ ಬ್ಲಾಸ್ಟ್; ಓರ್ವ ಮಹಿಳೆ ಸಾವು, ಇಬ್ಬರಿಗೆ ಗಾಯ - Boiler Explosion - BOILER EXPLOSION