ಮುಂಬೈ(ಮಹಾರಾಷ್ಟ್ರ): ವೆಸ್ಟ್ ಇಂಡೀಸ್ ಮತ್ತು ಭಾರತ ಮಹಿಳಾ ತಂಡಗಳ ನಡುವೆ ಟಿ20 ಕ್ರಿಕೆಟ್ ಸರಣಿ ನಡೆಯುತ್ತಿದೆ. 3ನೇ ಮತ್ತು ಅಂತಿಮ ಪಂದ್ಯದಲ್ಲಿಂದು ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಮತ್ತೊಮ್ಮೆ ಅಬ್ಬರಿಸಿದರು. ಸತತ 7 ಎಸೆತಗಳಲ್ಲಿ 7 ಬೌಂಡರ್ ಬಾರಿಸಿ ಗಮನ ಸೆಳೆದರು.
ನವಿ ಮುಂಬೈನ ಡಾ.ಡಿ.ವೈ.ಪಾಟೀಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಆರಂಭಿಕರಾಗಿ ಬ್ಯಾಟಿಂಗ್ಗಿಳಿದ ಮಂಧಾನ ಕೆರಿಬಿಯನ್ ಬೌಲರ್ಗಳನ್ನು ಚೆಂಡಾಡಿದರು.
ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಮಂಧಾನ ಇದೀಗ 3ನೇ ಪಂದ್ಯದಲ್ಲೂ ಅಬ್ಬರಿಸಿ 27 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ತಮ್ಮ ಅಮೋಘ ಇನ್ನಿಂಗ್ಸ್ನಲ್ಲಿ ಒಟ್ಟು 47 ಎಸೆತಗಳನ್ನು ಎದುರಿಸಿ 13 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 77 ರನ್ ಚಚ್ಚಿದರು. ಬಳಿಕ ಡಿಯೇಂಡ್ರಾ ಡಾಟಿನ್ ಎಸೆತದಲ್ಲಿ ಬೌಂಡರಿ ಬಾರಿಸಲು ಮುಂದಾಗಿ ಕ್ಯಾಚ್ ಔಟ್ ಆದರು.
7 ಎಸೆತಗಳಲ್ಲಿ 7 ಬೌಂಡರಿ: ಮಂಧಾನ ಮೂರು ಮತ್ತು ನಾಲ್ಕನೇ ಓವರ್‌ಗಳಲ್ಲಿ ಸತತ ಏಳು ಎಸೆತಗಳಲ್ಲಿ 7 ಬೌಂಡರಿ ಬಾರಿಸುವ ಮೂಲಕ ಘರ್ಜಿಸಿದರು. ಮೂರನೇ ಓವರ್ ಎಸೆದ ಹೆನ್ರಿ ಅವರ ನಾಲ್ಕನೇ ಎಸೆತದಲ್ಲಿ ಮಂಧಾನ ಬೌಂಡರಿ ಬಾರಿಸಿದರು. ಬಳಿಕ ಐದು ಮತ್ತು ಆರನೇ ಎಸೆತದಲ್ಲೂ ಬೌಂಡರಿ ಕಲೆಹಾಕಿದರು. ಇದರ ನಂತರ, ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ಸ್ಟ್ರೈಕ್ ಪಡೆದರು ಮತ್ತು ಡಾಟಿನ್ ಎಸೆದ ಎರಡನೇ ಎಸೆತದಲ್ಲಿ ಬೌಂಡರಿ, ಮೂರನೇ ಎಸೆತದಲ್ಲಿ ಸಿಕ್ಸರ್, ನಾಲ್ಕನೇ ಎಸೆತದಲ್ಲಿ ಬೌಂಡರಿ ಐದನೇ ಎಸೆತದಲ್ಲಿ ಬೌಂಡರಿ ಸಿಡಿಸಿದರು.
ಹ್ಯಾಟ್ರಿಕ್ ಅರ್ಧಶತಕ: ಸ್ಮೃತಿ ಮಂಧಾನ ಸತತ ಏಳು ಬೌಂಡರಿಗಳನ್ನು ಬಾರಿಸಿದ್ದು ಮಾತ್ರವಲ್ಲದೇ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸರಣಿಯಲ್ಲಿ ಇದು ಮಂಧಾನ ಅವರ ಮೂರನೇ ಅರ್ಧಶತಕ ಎಂಬುದು ಗಮನಾರ್ಹ. ಇದಕ್ಕೂ ಮುನ್ನ, ಮೊದಲ ಟಿ20 ಪಂದ್ಯದಲ್ಲಿ 54 ರನ್, ಎರಡನೇ ಪಂದ್ಯದಲ್ಲಿ 62 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
218 ರನ್ ಟಾರ್ಗೆಟ್: ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ಭಾರತದ ವನಿತೆಯರು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 217 ರನ್ ಕಲೆ ಹಾಕಿದ್ದಾರೆ. ತಂಡದ ಪರ ಸ್ಮೃತಿ ಮಂಧಾನ (77), ರಿಚಾ ಘೋಶ್ (54) ಅರ್ಧಶತಕ ಸಿಡಿಸಿದರೆ, ಜೆಮಿಮಾ ರೋಡ್ರಿಗಾಸ್ (39), ರಾಘವಿ ಬೀಸ್ಟ್ (31) ರನ್‌ಗಳ ಕೊಡುಗೆ ನೀಡಿದರು. ವೆಸ್ಟ್ ಇಂಡೀಸ್ ಪರ ಹೆನ್ರಿ, ಡಾಟಿನ್, ಅಲಿಯೇನಿ, ಫ್ಲೆಚ್ಚರ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್. ಅಶ್ವಿನ್ ಎಷ್ಟು ಕೋಟಿಗೆ ಒಡೆಯ: ವಾರ್ಷಿಕ ಆದಾಯ ಎಷ್ಟು?