ತುಮಕೂರು: ಸರ್ಕಾರದ ಎಲ್ಲಾ ಇಲಾಖೆಗಳಿಗೂ ಮೇಜರ್ ಸರ್ಜರಿಯಾಗಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಜನ ಸಾಮಾನ್ಯರು ಬದುಕುವುದಕ್ಕೂ ಸಾಧ್ಯವಾಗುವುದಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬೊಮ್ಮಾಯಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದ ಕೂಡಲೇ ಬಾಲಕ ಅಬ್ಬಾಸ್ (5) ಮೃತಪಟ್ಟಿದ್ದ ಎಂದು ಡಿಹೆಚ್‌ಒ ಸ್ಪಷ್ಟನೆ ನೀಡಿದ್ದಾರೆ. ಇದಕ್ಕಾಗಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಚಾಲಕ ಸೀನಪ್ಪನನ್ನು ಅಮಾನತು ಮಾಡಿದ್ದಾರೆ. ಅವರನ್ನು ಅಮಾನತು ಮಾಡಲು ಸಂದೇಶ ನೀಡಿದವರು ಯಾರು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಬಾಲಕ ಸಾವು.. ಹೆಚ್ಡಿಕೆ ಎದುರು ಶವವಿಟ್ಟು ಪ್ರತಿಭಟನೆ
ಸರ್ಕಾರದ ವೈಫಲ್ಯವನ್ನು ಅಧಿಕಾರಿಗಳು ಯಾವ ರೀತಿ ಮುಚ್ಚಿಕೊಳ್ಳುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತಿದೆ. ಅಧಿಕಾರಿಗಳನ್ನು ಅಮಾನತು ಮಾಡಿ ಒಂದೆರಡು ದಿನ ಬಿಟ್ಟು ಮತ್ತೆ ಸೇರಿಸಿಕೊಳ್ಳುತ್ತಾರೆ. ಇದು ಒಂದು ರೀತಿಯ ಜಂಗಲ್ ರಾಜ್ಯವಾಗುತ್ತಿದೆ. ಇದಕ್ಕೆ ಮೇಜರ್ ಸರ್ಜರಿಯಾಗಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರು ಬದುಕುವುದಕ್ಕೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಎಲ್ಲರೂ ಪ್ರಾದೇಶಿಕ ಪಕ್ಷಕ್ಕೆ ಸಹಕಾರ ನೀಡಬೇಕು ಎಂದು ಹೆಚ್ಡಿಕೆ ಮನವಿ ಮಾಡಿದರು.