ತುಮಕೂರು : ಯಾವ ಪಕ್ಷ ಅವರನ್ನು ಬೆಳೆಸುತ್ತದೆಯೋ ಅದಕ್ಕೆ ಬೆಂಕಿ ಹಾಕುವುದು ಸಿದ್ದರಾಮಯ್ಯನವರ ಕೆಲಸವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಂತಿಮ ಮೊಳೆ ಹೊಡೆಯುವುದೇ ಸಿದ್ದರಾಮಯ್ಯನವರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಅರೆಹಳ್ಳಿ ಗ್ರಾಮದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೊಂದು ದಿನ ಈ ವಿಷಯ ಬೆಳಕಿಗೆ ಬರಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಹೇಳುತ್ತಿರುವ ಅವರನ್ನು ಬೆಳಕಿಗೆ ತಂದಿದ್ದೇ ಜೆಡಿಎಸ್ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರುವುದು ಜೆಡಿಎಸ್ ಪಕ್ಷದ ಕಾರ್ಯಕರ್ತರ ದುಡಿಮೆಯ ಫಲವಾಗಿದೆ. ಇಲ್ಲದೆ ಹೋಗಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಇವರನ್ನು ಯಾರೂ ಗುರುತಿಸುತ್ತಿರಲಿಲ್ಲ. ಸಾಮಾನ್ಯ ಕಾರ್ಯಕರ್ತರಂತೆ ಇರುತ್ತಿದ್ದರು ಎಂದು ಟೀಕಿಸಿದರು.
ಸಿಬಿಐ ದಾಳಿ ಉದ್ದೇಶ ಸ್ಪಷ್ಟಪಡಿಸಲು ಹೆಚ್ಡಿಕೆ ಒತ್ತಾಯ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ದಾಳಿ ಬಗ್ಗೆ ಯಾವುದೇ ರೀತಿಯ ಸಂಶಯಗಳಿಗೆ ಎಡೆ ಮಾಡಿಕೊಡದಂತೆ ಅದರ ಹಿಂದಿನ ಉದ್ದೇಶವನ್ನು ಸಿಬಿಐ ಬಹಿರಂಗಪಡಿಸಬೇಕು. ಈ ಹಿಂದೆ ನಡೆದ ಐಟಿ ಮತ್ತು ಇಡಿ ದಾಳಿಯ ಮುಂದುವರೆದ ಭಾಗ ಇದಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆಗೂ ಈ ದಾಳಿಗೂ ಯಾವುದೇ ಸಂಬಂಧವಿಲ್ಲ. ಯಾವುದೇ ರೀತಿಯ ಬೇನಾಮಿ ಕೆಲಸಗಳನ್ನು ಮಾಡದವರು ಇಂತಹ ದಾಳಿಗಳಿಗೆ ಹೆದರುವ ಅವಶ್ಯಕತೆ ಇಲ್ಲ. ದಾಳಿ ಕುರಿತಂತೆ ಸಿಬಿಐ ಅಧಿಕಾರಿಗಳು ಅಥವಾ ಡಿ.ಕೆ.ಶಿವಕುಮಾರ್ ಅವರೇ ಸ್ಪಷ್ಟಪಡಿಸಬೇಕಿದೆ ಎಂದು ತಿಳಿಸಿದರು.
ಇನ್ನೆರಡು ದಿನದಲ್ಲಿ ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಿದ್ದೇವೆ ಎಂದು ಹೆಚ್ಡಿಕೆ ಹೇಳಿದರು.