ತುಮಕೂರು: ಜೆಡಿಎಸ್ ಪಕ್ಷದಲ್ಲಿ ದೊಡ್ಡವರು ಮಾತನಾಡಿದರೆ ಸರಿ, ಸಣ್ಣವರು ಮಾತನಾಡಿದರೆ ತಪ್ಪು ಎಂಬ ಭಾವನೆ ಇದೆ ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್ .ಆರ್. ಶ್ರೀನಿವಾಸ್ ಹೇಳಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಮಾತನಾಡಿದರೆ ತಪ್ಪಾಗುತ್ತೆ. ಅದಕ್ಕೆ ಬಣ್ಣ ಕಟ್ಟುತ್ತಾರೆ. ತುಮಕೂರಿನಲ್ಲಿ ಚುನಾವಣೆಗೆ ನಿಂತಾಗ ನಾವು ಎಲ್ಲರ ಮನೆಗೆ ಹೋಗಲ್ವಾ, ಕೈ ಕಾಲು ಹಿಡಿಯಲ್ವ. ಅದೇ ರೀತಿ ದೇವೇಗೌಡರಿಗೆ ಬನ್ನಿ ರಾಜಣ್ಣ, ಮುದ್ದಹನುಮೇಗೌಡರ ಮನೆಗೆ ಹೋಗೋಣ ಎಂದು ಹೇಳಿದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ ಎಂದರು.
ಓದಿ : ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಪೊಲೀಸ್ ಜೀಪ್
ದೇವೇಗೌಡರಿಗೆ ಪಕ್ಷ ಕಟ್ಟುವ ಹುಮ್ಮಸ್ಸಿದೆ. ಆದರೆ ಅವರಿಗೆ ವಯಸ್ಸಿಲ್ಲ. ತಿರುಗಾಡೋಕೆ ದೇಹ ಸಹಾಯ ಮಾಡುತ್ತಿಲ್ಲ. ಎನ್ಡಿಎ ಜೊತೆಗೆ ಮೈತ್ರಿ ವಿಚಾರದಲ್ಲಿ ದೇವೇಗೌಡರ ಉಸಿರಿರೋವರೆಗೂ ಅದು ಸಾಧ್ಯ ಇಲ್ಲ. ಅಧಿಕಾರಕ್ಕಾಗಿ ಅವರು ಯಾವತ್ತೂ ಕೆಲಸ ಮಾಡಿದವರಲ್ಲ. ಬಹುತೇಕ ಜೀವನ ಪೂರ್ತಿ ವಿರೋಧ ಪಕ್ಷದಲ್ಲೇ ಕೆಲಸ ಮಾಡಿದವರು ಎಂದರು.
ಜೆಡಿಎಸ್ ಮುಖಂಡರ ಸಭೆಗೆ ಯಾರು ಯಾರು ಬರುತ್ತಾರೋ ಗೊತ್ತಿಲ್ಲ. ನಾನಂತೂ ಹೋಗುತ್ತೀನಿ. ವಿಚಾರ ಏನು ಅಂತ ಗೊತ್ತಿಲ್ಲ, ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತೆ. ನಮಗೆ ಅಸಮಾಧಾನ ಏನೂ ಇಲ್ಲ. ಏನು ನಡೆದಿತ್ತು ಅದನ್ನು ಹೇಳುತ್ತೇವೆ. ಅದಕ್ಕೆ ಅವರು ಬೇಜಾರು ಮಾಡಿಕೊಂಡರೆ ಏನೂ ಮಾಡೋದಕ್ಕೆ ಆಗಲ್ಲ. ಯಾರಿಗೋ ನಾವು ಅಡಿಯಾಳಾಗಿರೋಕೆ ಆಗಲ್ಲ. ಸಮಯ ಬಂದಾಗ ನಮ್ಮದೆ ನಿಲುವುಗಳನ್ನು ವ್ಯಕ್ತಪಡಿಸೋದಕ್ಕೆ ನಮಗೆ ಅಧಿಕಾರ ಇದೆ ಎಂದರು.
ಬಿಜೆಪಿ ಜೊತೆ ಮೈತ್ರಿ ಬಗ್ಗೆ ವೈಎಸ್ವಿ ದತ್ತಾ, ನಾನೂ ಸೇರಿದಂತೆ ಅನೇಕ ಜನರು ವಿರೋಧ ವ್ಯಕ್ತಪಡಿಸಿದ್ದೇವೆ. ಕುಮಾರಸ್ವಾಮಿಯವರು ನನ್ನ ಮತ್ತು ದತ್ತ ಅವರ ಮಾತಿಗೆ ಹೆದರಿಕೊಳ್ಳುವ ವ್ಯಕ್ತಿಯಲ್ಲ ಎಂದರು.