ತುಮಕೂರು: ಕೋವಿಡ್ ಭೀತಿ ಹಿನ್ನೆಲೆ ಈ ಬಾರಿಯೂ ಅದ್ಧೂರಿ ಗಣೇಶ ಉತ್ಸವಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಇದರಿಂದ ಗಣೇಶ್ ಮೂರ್ತಿ ತಯಾರಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗಣೇಶ ಹಬ್ಬವನ್ನೇ ನಂಬಿಕೊಂಡು ಬದುಕಿದ್ದ ನಗರದ 500ಕ್ಕೂ ಹೆಚ್ಚು ಮಂದಿ ಮೂರ್ತಿ ತಯಾರಕರ ಬದುಕು ಅಂತಂತ್ರವಾಗಿದೆ. ಇತ್ತ ಮಾರ್ಗಸೂಚಿಯನ್ನು ಸಹ ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದ ಜನರಲ್ಲಿ ಉತ್ಸಾಹ ಕುಂದಿ ಹೋಗಿದೆ. ಅದಕ್ಕಾಗಿ ಸರ್ಕಾರ ಪರಿಹಾರವನ್ನಾದರೂ ನೀಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.
ಪ್ರತಿವರ್ಷ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳಿಂದ ಗಣಪತಿ ಮೂರ್ತಿಗಳಿಗಾಗಿ ಬೇಡಿಕೆ ಬರುತ್ತಿತ್ತು. ಹಬ್ಬದ 2 ತಿಂಗಳ ಮುನ್ನವೇ ವ್ಯಾಪರ ಜೋರಾಗಿರುತ್ತಿತ್ತು. ಜೇಡಿಮಣ್ಣಿನಲ್ಲಿ ತಯಾರಿಸುವುದರಿಂದ ಕನಿಷ್ಠ ಮೂರ್ತಿ ತಯಾರಿಕೆಗೆ 1 ವಾರ ಬೇಕಾಗತ್ತದೆ. ಆದರೆ ಈ ಬಾರಿ ಯಾವುದೇ ಬೇಡಿಕೆ ಇಲ್ಲದೇ ಕಲಾವಿದರ ಕುಟುಂಬ ಆರ್ಥಿಕ ದುಃಸ್ಥಿತಿ ಎದುರಿಸುತ್ತಿದೆ.
ಸರ್ಕಾರ ಗಣೇಶೋತ್ಸವಕ್ಕೆ ಇನ್ನೂ ಯಾವುದೇ ರೀತಿಯ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ. ಹೀಗಾಗಿ ಜನರು ಹಬ್ಬ ಆಚರಣೆ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಈ ಕುರಿತು ಸರ್ಕಾರ ಸೂಕ್ತ ಕ್ರಮಕೈಗೊಂಡರೆ ಮೂರ್ತಿ ತಯಾರಕರು ಸಹ ಅದಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಲಿದ್ದಾರೆ.
ಒಟ್ಟಾರೆಯಾಗಿ ಸರ್ಕಾರದ ದ್ವಂದ ನಿಲುವು ಗಣೇಶ ಮೂರ್ತಿ ತಯಾರಕರ ಅತಂತ್ರ ಸ್ಥಿತಿಗೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.