ತುಮಕೂರು: ಕೊರೊನಾ ಭೀತಿ ಹಿನ್ನೆಲೆ ಕೊಬ್ಬರಿ ಬೆಲೆ ಗಣನೀಯವಾಗಿ ಕುಸಿದು ಹೋಗಿದ್ದು, ಉತ್ತರ ಭಾರತದ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಪ್ರತಿ ಕ್ವಿಂಟಾಲ್ಗೆ 10,300 ರೂ.ನಂತೆ ಖರೀದಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಜೆ.ಸಿ.ಮಧುಸ್ವಾಮಿ ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದ ವನಮಹೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2 ಲಕ್ಷ ಮೆಟ್ರಿಕ್ ಟನ್ನಷ್ಟು ಕೊಬ್ಬರಿಯನ್ನು ರೈತರಿಂದ ನಾಫೆಡ್ ಮೂಲಕ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲಾ ಎಪಿಎಂಸಿಗಳಲ್ಲಿ ಕೊಬ್ಬರಿ ಕ್ವಿಂಟಾಲ್ಗೆ 10,300 ರೂ.ನಂತೆ ಖರೀದಿಸಲಾಗುವುದು ಎಂದರು.
ಶೀಘ್ರದಲ್ಲೇ ಜಿಲ್ಲಾಧಿಕಾರಿಗಳು ಈ ಕುರಿತು ನೋಟಿಫಿಕೇಶನ್ ಹೊರಡಿಸಲಿದ್ದಾರೆ. ಈ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
14ರಿಂದ 16 ಸಾವಿರ ರೂ. ಇದ್ದ ಕೊಬ್ಬರಿ ಬೆಲೆ 8 ಸಾವಿರಕ್ಕೆ ಕುಸಿದಿದೆ. ಹೀಗಾಗಿ ಇದನ್ನು ಮನಗಂಡು ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಶ್ರೀಗಂಧದ ಮರಗಳನ್ನು ರೈತರು ಬೆಳೆಸಿ ತಮ್ಮ ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಬಹುದಾಗಿದೆ. ಗಂಧದ ಮರಗಳು ಕಟಾವಿಗೆ ಬಂದ ಸಂದರ್ಭದಲ್ಲಿ ಅವುಗಳನ್ನು ಜತನದಿಂದ ಕಾಪಾಡುವುದು ಬಹುದೊಡ್ಡ ಕೆಲಸವಾಗುತ್ತದೆ ಎಂದರು.