ತುಮಕೂರು: ಗಾಂಧೀಜಿಯವರು ಎಂದಿಗೂ ನಾನು ಹೇಳಿದಂತೆ ನಡೆ ಎಂದು ಹೇಳಿಲ್ಲ. ಆದರೆ ನಾನು ಮಾಡಿರುವ, ನಡೆದು ಬಂದ ಹಾದಿಯಲ್ಲಿ ನಡೆಯಿರಿ ಎಂದು ಮಾರ್ಗದರ್ಶನ ತೋರಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ ಹೇಳಿದರು.
ಮಹಾತ್ಮ ಗಾಂಧೀಜಿಯವರ 159 ನೇ ಜನ್ಮದಿನಾಚರಣೆಯ ಅಂಗವಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ತುಮಕೂರು ವಿಶ್ವವಿದ್ಯಾಲಯದ ಡಿ. ದೇವರಾಜ ಅರಸು ಅಧ್ಯಯನ ಪೀಠ ವತಿಯಿಂದ 'ಗಾಂಧಿ ತಿಳಿವ ಹಾದಿ' ಎಂಬ ವಿಚಾರ ಸಂಕಿರಣವನ್ನು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ವಿ.ಎಂ.ತಿಪ್ಪನಗೌಡ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ವೈ.ಎಸ್.ಸಿದ್ದೇಗೌಡ, ಎಲ್ಲ ಮಹನೀಯರು ನಿಗೂಢವಾಗಿ ಇರುತ್ತಾರೆ. ಅವರನ್ನು ನಾವು ತಿಳಿಯುತ್ತಾ ಹೋದಂತೆಲ್ಲಾ ಅವರ ಚಿಂತನೆಗಳು ಎಷ್ಟು ಆಳಕ್ಕೆ ಹೋಗಿವೆ ಎಂಬುದು ತಿಳಿಯುತ್ತವೆ ಎಂದರು.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಸರಿಯಾದ ಮಾರ್ಗದರ್ಶಕರು ಇಲ್ಲದೆ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಅಂತಹ ಯುವಕರು ಗಾಂಧೀಜಿಯವರ ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಕ್ಕೆ ಕೊಡುಗೆಯನ್ನು ನೀಡಬೇಕಿದೆ ಎಂದರು.