ತುಮಕೂರು: ವದನಕಲ್ಲು ಗ್ರಾಮದ ಗೋ ಶಾಲೆಗೆ ಸಮರ್ಪಕವಾಗಿ ಮೇವು ಪೂರೈಕೆ ಮಾಡದ ಕಾರಣ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ತಾಲೂಕಿನ ವದನಕಲ್ಲು ಗ್ರಾಮದಲ್ಲಿ ಸರ್ಕಾರದ ವತಿಯಿಂದ ಗೋ ಶಾಲೆ ತೆರೆದಿದ್ದು, ಇಲ್ಲಿ ಒಂದು ಸಾವಿರ ಹಸುಗಳಿಗೆ ಮೇವು ಪೂರೈಕೆ ಮಾಡುವಲ್ಲಿ ತಾರತಮ್ಯ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ದನಕರುಗಳಿಗೆ ಮೇವಿಲ್ಲದೆ ಉಪವಾಸದಿಂದ ಕಟ್ಟಿ ಹಾಕುವಂತಾಗಿದೆ ಎಂದು ಆಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡರು.
ರೈತ ನುಂಕಪ್ಪ ಮಾತನಾಡಿ, ಕಳೆದ ಒಂದು ವಾರದಿಂದ ಸಾವಿರ ಹಸುಗಳಿಗೆ ಸಮರ್ಪಕವಾಗಿ ಮೇವು ವಿತರಣೆ ಮಾಡುತ್ತಿಲ್ಲ. ಪ್ರತಿದಿನ 8ಕ್ಕೂ ಹೆಚ್ಚು ಲೋಡು ಮೇವು ವಿತರಣೆ ಮಾಡಬೇಕಿದೆ. ಹಸಿ ಮೇವು ಒಬ್ಬ ರೈತನಿಗೆ 16 ಕೆಜಿ, 8 ಕೆಜಿ ಒಣ ಮೇವು ವಿತರಣೆ ಮಾಡಬೇಕಿದೆ. ಆದರೆ ಸಾವಿರ ಹಸುಗಳಿಗೆ 1 ಲೋಡು ಮೇವನ್ನು ಎಷ್ಟು ಹಸುಗಳಿಗೆ ವಿತರಿಸಲು ಸಾಧ್ಯವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.