ತುಮಕೂರು: ಮುಖ್ಯಮಂತ್ರಿ ಯಡಿಯೂರಪ್ಪ ಈ ಇಳಿ ವಯಸ್ಸಲ್ಲೂ ಬೆಳಗ್ಗೆ ಸಂಜೆ ಮೀಟಿಂಗ್ ಮಾಡಿ ಮಾಡಿ ಸಾಕಾಗಿ ಬೆಂಗಳೂರಿನ ಗ್ರಾಮ ದೇವತೆ ಅಣ್ಣಮ್ಮನಿಗೆ ನೀನೇ ಗತಿ ಅಂತಾ ಕೈಮುಗಿದಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ವ್ಯಂಗ್ಯವಾಡಿದ್ದಾರೆ.
ಮಧುಗಿರಿ ತಾಲೂಕು ಆಸ್ಪತ್ರೆಗೆ ಆ್ಯಂಬುಲೆನ್ಸ್ ಹಾಗೂ ವೈದ್ಯಕೀಯ ಉಪಕರಣಗಳನ್ನು ವಿತರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಮಾನಸಿಕವಾಗಿ ನೊಂದು ಅಲ್ಲಿಗೆ ಬಂದು ನಿಂತಿದ್ದಾರೆ. ಅಣ್ಣಮ್ಮದೇವಿ ಇಷ್ಟು ದಿನ ಜ್ಞಾಪಕಕ್ಕೆ ಬಂದಿರಲಿಲ್ಲ ಈಗ ಬಂದಿದೆ. ಯಡಿಯೂರಪ್ಪರಿಗೆ ಆಡಳಿತದ ಮೇಲೆ ಹಿಡಿತ ಇಲ್ಲ ಎಂದರು.
ಕೇಂದ್ರ, ರಾಜ್ಯ ಸರ್ಕಾರಗಳು ಜನತೆಗೆ ಶಾಪಗ್ರಸ್ತ ಸರ್ಕಾರಗಳಾಗಿವೆ. ಲಾಕ್ಡೌನ್ ಹೇಳಿಕೆಯಲ್ಲಿ ಗೊಂದಲವಿದ್ದು, ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ. ಯಡಿಯೂರಪ್ಪ ಸೋಮವಾರದಿಂದ ಕಂಪ್ಲೀಟ್ ಲಾಕ್ಡೌನ್ ಅಂತಾರೆ. ಮುಖ್ಯ ಕಾರ್ಯದರ್ಶಿ ಅವರು ಹಿಂದಿನ ಷರತ್ತು ಬಿಗಿ ಮಾಡ್ತೀನಿ ಅಂತಾರೆ. ಈ ರೀತಿಯ ದ್ವಂದ್ವ ನಿಲುವು ಸರ್ಕಾರದಿಂದ ವ್ಯಕ್ತವಾದಾಗ ಜಾರಿ ಮಾಡೋದಕ್ಕೆ ಅಧಿಕಾರಿಗಳಿಗೆ ಗೊಂದಲ ಆಗುತ್ತೆ ಎಂದಿದ್ದಾರೆ.
ಮೊದಲು ಸರ್ಕಾರದವರು ತೀರ್ಮಾನ ಮಾಡಿ ತಿಳಿಸಬೇಕು ಆಗ ಜನ ಗೊಂದಲಕ್ಕೆ ಬೀಳೊಲ್ಲ. ಅಧಿಕಾರಿಗಳಿಗೂ ಸರ್ಕಾರದ ನಿರ್ಧಾರ ಜಾರಿ ಮಾಡಲು ಅನುಕೂಲವಾಗುತ್ತೆ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ನನಗೆ ತುಂಬಾ ಗೌರವ ಇದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್ ಜನತೆಯ ಪರವಾಗಿ ನಿಲುವು ಜನತೆ ನಂಬಿಕೆ ಹೆಚ್ಚಾಗಿದೆ ಎಂದಿದ್ದಾರೆ.
ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಬಿಜೆಪಿಯೇತರ ಸರ್ಕಾರ ಇದೆ ಅವರಿಗೆ ತಾರತಮ್ಯ ಮಾಡೋದು ಸರಿಯಲ್ಲ. ಇದನ್ನ ನಾವು ಖಂಡಿಸುತ್ತೇವೆ. ಹಣ ಕೊಡುವುದರಿಂದ ಹಿಡಿದು ಎಲ್ಲದರಲ್ಲೂ ನಮಗೆ ಅನ್ಯಾಯವಾಗ್ತಿದೆ ಎಂದಿದ್ದಾರೆ.