ತುಮಕೂರು: ಜೆಡಿಎಸ್ ಮಾಜಿ ಶಾಸಕ ಡಿಸಿ ಗೌರಿಶಂಕರ್ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ಹಿನ್ನೆಲೆ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆ ಆಗಿದ್ದ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.
ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಗೌಡ ವಿರುದ್ಧ ಗೌರಿಶಂಕರ್ ಕೇವಲ 3000 ಮತಗಳ ಅಂತರದಿಂದ ಸೋಲು ಕಂಡಿದ್ದರು. ಅಲ್ಲದೇ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಗಟ್ಟಿಯಾಗಿ ನೆಲೆಗೊಳ್ಳಲು ಸಾಕಷ್ಟು ಶ್ರಮವಹಿಸಿದ್ದರು. ಅಲ್ಲದೇ ಗೌರಿಶಂಕರ್ ವೈಯಕ್ತಿಕ ವರ್ಚಸ್ಸಿನಿಂದ ಜೆಡಿಎಸ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದರು.
ಕಳೆದ ಮೂರು ವಿಧಾನಸಭೆ ಚುನಾವಣೆಗಳಿಂದ ಕೂಡ ಕ್ಷೇತ್ರದಲ್ಲಿ ಜೆಡಿಎಸ್ ಮತಗಳಿಕೆ ಪ್ರಮಾಣ ನಿರೀಕ್ಷೆಗೂ ಮೀರಿತ್ತು. ಆದರೆ, ಇದೀಗ ಡಿಸಿ ಗೌರಿಶಂಕರ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಜೆಡಿಎಸ್ ಪಕ್ಷಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ಇನ್ನು ಶಾಸಕ ಡಿ ಸಿ ಗೌರಿಶಂಕರ್ ಪ್ರಕಾರ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಇನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ಪಕ್ಷದ ಮುಖಂಡರು ಹೇಳಿರುವುದು ಕ್ಷೇತ್ರದಲ್ಲಿ ಸಾಕಷ್ಟು ಗೊಂದಲ ಉಂಟುಮಾಡಿದೆ.
ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಜೊತೆ ಸೇರಿ ಚುನಾವಣೆ ಎದುರಿಸುವುದು ಸಾಧ್ಯವೇ ಇಲ್ಲ. ಅಲ್ಲದೇ ಮುಂದಿನ ಜಿಪಂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಮೈತ್ರಿ ಮುಂದುವರಿದರೆ ಜೆಡಿಎಸ್ ಬೆಂಬಲಿತ ಸ್ಥಳೀಯ ಮುಖಂಡರಿಗೆ ಸಾಕಷ್ಟು ಅನ್ಯಾಯವಾಗಲಿದೆ. ಹೀಗಾಗಿ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರ ಭಾವನೆಗಳಿಗೆ ಪೂರಕವಾಗಿ ಮಾತುಕತೆ ನಡೆಸಿ ಕಾಂಗ್ರೆಸ್ ಸೇರ್ಪಡೆ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಡಿ ಸಿ ಗೌರಿಶಂಕರ್ ಸೇರ್ಪಡೆಯಿಂದ ಕಾಂಗ್ರೆಸ್ಗೆ ಬಲ : ಇನ್ನು ಡಿ ಸಿ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಬಲ ತುಂಬಲಿದೆ. ಅಲ್ಲದೇ ಬಹುತೇಕ ಡಿ ಸಿ ಗೌರಿಶಂಕರ್ ಬೆಂಬಲಿತರೆಲ್ಲರೂ ಕೂಡ ಕಾಂಗ್ರೆಸ್ ಪಕ್ಷದ ಪರವಾಗಿ ನಿಲ್ಲುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಬ್ಯಾಂಕ್ ಅದ್ಭುತವಾಗಿ ಲಭಿಸಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಇದನ್ನೂಓದಿ:ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ