ತುಮಕೂರು: ಸ್ಮಾರ್ಟ್ಸಿಟಿ ಮತ್ತು ಮಹಾನಗರ ಹಾಗೂ ಎಪಿಎಂಸಿ ಅಭಿವೃದ್ಧಿ ಹೆಸರಲ್ಲಿ ನಗರದ ಜೆ.ಸಿ ರಸ್ತೆಯ ಸಿದ್ದಿವಿನಾಯಕ ಮಾರುಕಟ್ಟೆ ಜಾಗವನ್ನು ಪರಭಾರೆ ಮಾಡಲು ಹುನ್ನಾರ ನಡೆಸಲಾಗುತ್ತಿದೆ. ಅಲ್ಲದೆ ರಾತ್ರೋರಾತ್ರಿ ಆ ಸ್ಥಳದಲ್ಲಿದ್ದ ಗಣೇಶ ದೇವಾಲಯವನ್ನು ಒಡೆದು ಹಾಕಿಸಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಗುಲವನ್ನು ಒಡೆದುಹಾಕುವ ಮೂಲಕ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ. ಇದ್ರಿಂದ ಸ್ಥಳೀಯರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ತೆರವುಗೊಳಿಸುವುದಾಗಿ ಮಹಾನಗರ ಪಾಲಿಕೆ ಆಯುಕ್ತರು ಹೇಳುತ್ತಿದ್ದಾರೆ. ಆದರೆ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ತೆರವುಗೊಳಿಸುವಂತೆ ಆದೇಶವಿರುವುದಿಲ್ಲ. ಧಾರ್ಮಿಕ ದತ್ತಿ ನಿಯಮಾನುಸಾರ ವಿಧಿವತ್ತಾಗಿ ಪೂಜಾ ಪುನಸ್ಕಾರಗಳನ್ನು ಮಾಡಿ ಗರ್ಭಗುಡಿಯ ವಿಗ್ರಹ ಸ್ಥಳಾಂತರಿಸಿದ ನಂತರ ಕಟ್ಟಡ ತೆರವುಗೊಳಿಸಬೇಕಿತ್ತು ಎಂದಿದ್ದಾರೆ.
ಪಾರ್ಕ್, ಸರ್ಕಾರಿ ನಿವೇಶನ, ರಸ್ತೆ, ರಾಜಕಾಲುವೆ ಸೇರಿದಂತೆ ಅನೇಕ ಕಟ್ಟಡಗಳನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಆದ್ರೆ ಗೋಕುಲ ಬಡಾವಣೆ ಬಡ್ಡಿಹಳ್ಳಿಯಲ್ಲಿರುವ ದೇವಸ್ಥಾನ, ಅನಧಿಕೃತವಾಗಿ ರಿಂಗ್ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಮದರಸಾ, ಸಾಬರಪಾಳ್ಯ, ಖಾದರ್ ನಗರಗಳಲ್ಲಿ ಕಟ್ಟಿರುವ ಅನಧಿಕೃತ ಅಲ್ಪಸಂಖ್ಯಾತರ ಘೋರಿ, ಧಾರ್ಮಿಕ ಕೇಂದ್ರಗಳು ಇತ್ಯಾದಿಗಳನ್ನು ಯಾಕೆ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತುಮಕೂರು : ಭರದಿಂದ ಸಾಗುತ್ತಿದೆ ಹಸುಗಳಿಗೆ ಇಯರ್ ಟ್ಯಾಗ್ ಅಳವಡಿಕೆ ಕಾರ್ಯ