ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕು, ಗುಬ್ಬಿ ,ತುಮಕೂರು ಗ್ರಾಮಾಂತರ ಭಾಗದಲ್ಲಿ ಜನರಲ್ಲಿ ಆತಂಕ ಮೂಡಿಸಿದೆ ಆ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವುದೇ ಅರಣ್ಯ ಇಲಾಖೆಗೆ ದೊಡ್ಡ ತಲೆ ಬಿಸಿಯಾಗಿದೆ. ಮೂರು ತಿಂಗಳಿನಿಂದ ಮೂವರನ್ನು ಬಲಿ ತೆಗೆದುಕೊಂಡಿರುವ ಚಿರತೆ ಗ್ರಾಮಸ್ಥರಲ್ಲಿ ಪ್ರಾಣ ಭೀತಿ ಮೂಡಿಸಿದೆ.
ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ವತಿಯಿಂದ ಈಗಾಗಲೇ ಚಿರತೆಗಳು ಸಂಚರಿಸುವಂತಹ ವಿವಿಧ ಭಾಗಗಳಲ್ಲಿ 20 ಬೋನುಗಳನ್ನು ಇರಿಸಲಾಗಿದೆ. ಅಲ್ಲದೆ ಚಿರತೆ ಸೆರೆ ಹಿಡಿಯಲು ವಿಶೇಷ ಕ್ಯಾಂಪನ್ನು ಕೂಡ ಮಾಡಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಇನ್ನೊಂದೆಡೆ ಕಾಮನಹಳ್ಳಿ ಸಮೀಪ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ದಾಖಲಾಗಿದೆ. 2 ದಿನಗಳ ಹಿಂದೆ ಸುಮಾರು ಹದಿನೈದು ವರ್ಷ ವಯಸ್ಸಿನ ಬಾಲಕನನ್ನು ಬಲಿತೆಗೆದುಕೊಂಡ ಸ್ಥಳದಲ್ಲೇ ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಈ ಚಿರತೆಯ ಪ್ರತ್ಯಕ್ಷವಾಗಿದೆ. ಚಿರತೆಯ ಫೋಟೋವನ್ನು ಕೂಡಾ ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.