ತುಮಕೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. ಸಾವಿಗೂ ಮುನ್ನ ತಮ್ಮ ದೊಡ್ಡಮ್ಮನಿಗೆ ಡೆತ್ ನೋಟ್ ಬರೆದಿರುವ ಗರೀಬ್ ಸಾಬ್ ಎಂಬುವರು ಕುಟುಂಬ ಸಮೇತ ಸಾವಿನ ಹಾದಿ ಹಿಡಿದಿದ್ದಾರೆ. ಗರೀಬ್‌ಸಾಬ್ (36), ಸುಮಯಾ (32) ದಂಪತಿಯು ಮಕ್ಕಳಾದ ಹಾಜೀರಾ (14), ಮಹ್ಮದ್ ಶುಭಾನ್ (10) ಮತ್ತು ಮಹ್ಮದ್ ಮುನೀರ್ (8)ನನ್ನು ಸಾಯಿಸಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಾ ತಾಲೂಕಿನ ಲಕ್ಕನಹಳ್ಳಿ ಮೂಲದ ಇವರು ನಗರದ ಸದಾಶಿವನಗರದ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳ ಜೊತೆ ಗರೀಬ್‌ಸಾಬ್, ಸುಮಯಾ ದಂಪತಿ ವಾಸವಾಗಿದ್ದರು. ಆದರೆ ಸಾಲಬಾಧೆ, ವ್ಯಾಪಾರದಲ್ಲಿ ನಷ್ಟ ಮತ್ತು ಅಕ್ಕಪಕ್ಕದವರ ಕಿರುಕುಳದಿಂದ ಬೇಸತ್ತು ಸಾವಿಗೆ ಶರಣಾಗಿದ್ದಾರೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ: ನಮಗೆ ಸಾಲ ಹೆಚ್ಚಾಗಿದೆ, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ. ಹೀಗಾಗಿ ಸಂಸಾರ ಮಾಡೋದು ಕಷ್ಟವಾಗಿದೆ. ಊಟ ಮಾಡೋಕು ಕಷ್ಟ ಆಗಿದೆ. ಜೊತೆಗೆ ಮೂರು ತಿಂಗಳ ಮನೆ ಬಾಡಿಗೆ ಕೊಡುವುದಿದ್ದು, ಜೀವನ ನಡೆಸುವುದು ಕಷ್ಟವಾಗುತ್ತಿದೆ. ಇನ್ನು ನಮ್ಮ ಮನೆಯ ಸಾಮಾನುಗಳನ್ನು ಮತ್ತು ಬಾಡಿಗೆ ಮನೆಗೆ ನೀಡಿದ ಅಡ್ವಾನ್ಸ್ ಹಣವನ್ನು ನಮ್ಮ ದೊಡ್ಡಮ್ಮ ಮತ್ತು ಕುಟುಂಬಸ್ಥರು ತೆಗೆದುಕೊಳ್ಳಬೇಕೆಂದು ಡೆತ್ ನೋಟ್ನಲ್ಲಿ ಬರೆಯಲಾಗಿದೆ.
ಸದಾಶಿವನಗರದ ಮೂರನೇ ಬಿ ಮುಖ್ಯ ರಸ್ತೆಯಲ್ಲಿ ವಾಸಿಸುತ್ತಿರುವ ನಮಗೆ ಕೆಲವರು ಕಿರುಕುಳ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಬರೆಯಲು ವಿಷಯ ಬಹಳಷ್ಟಿದೆ. ಆದರೆ ಎಲ್ಲವನ್ನೂ ಬರೆಯಲು ಆಗುತ್ತಿಲ್ಲ, ಇನ್ನಷ್ಟು ವಿಷಯ ಫೋನ್ನಲ್ಲಿದೆ ಎಂದು ಬರೆದಿರುವುದು ಡೆತ್ನೋಟ್ನಲ್ಲಿದೆ. ಇನ್ನು ಸಾವಿಗೂ ಮುನ್ನ ವಾಟ್ಸಾಪ್ನಲ್ಲಿ ವಿಡಿಯೋ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
ಎಸ್ಪಿ ಅಶೋಕ್ ಕೆ. ವಿ ಮಾಹಿತಿ: ''ನಮಗೆ ಭಾನುವಾರ 7.30ಗೆ ಕರೆ ಬಂದಿದೆ. ಒಂದೇ ಮನೆಯಲ್ಲಿ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ನೇಣಿಗೆ ಹಾಕಿಕೊಂಡಿದ್ದಾರೆ ಎಂಬ ಮಾಹಿತಿಬಂತು. ಐದು ನಿಮಿಷಕ್ಕೆ ನಾವು ಸ್ಥಳಕ್ಕೆ ಬಂದಿದ್ವಿ. ಇಬ್ಬರ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದವು. ಮೂವರು ಮಕ್ಕಳ ಮೃತ ದೇಹ ಹಾಸಿಗೆಯಲ್ಲಿವೆ. ಮೃತರು ಶಿರಾ ತಾಲ್ಲೂಕು ಲಕ್ಕನಹಳ್ಳಿಯವರು. ಸಾಯುವ ಮುನ್ನ ಸಂಬಂಧಿಕರಿಗೆ ವಿಡಿಯೋ ಮೆಸೇಜ್ ಕಳುಹಿಸಿದ್ದಾರೆ. ಅದರಲ್ಲಿ ಏನು ಮಾಹಿತಿಯಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ವಿಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ದಂಡು ಮಂಡಳಿ ಸಿಇಒ ಆನಂದ್ ಅನುಮಾನಾಸ್ಪದ ಸಾವು : ಡೆತ್ ನೋಟ್ ಪತ್ತೆ