ಪಾವಗಡ (ತುಮಕೂರು): ತಾಲೂಕಿನ ಬ್ಯಾಡನೂರು ಕೆರೆಯಲ್ಲಿನ ಮೀನು ಹಿಡಿಯುವ ಹರಾಜು ಅವಧಿ ಮುಕ್ತಾಯವಾಗಿದೆ. ಆದರೂ ತಾಲೂಕು ಮೀನುಗಾರಿಕೆ ಇಲಾಖೆ ಬ್ಯಾಡನೂರು ನಾಗಭೂಷಣ ಗ್ರಾಮದ ಜನತೆಗಾಗಲಿ, ಸುತ್ತಮುತ್ತಲಿನ ಗ್ರಾಮಗಳ ಜನತೆಗಾಗಲಿ ಯಾವುದೇ ಮಾಹಿತಿ ನೀಡದೆ ಪರವಾನಗಿ ಮುಂದುವರೆಸಿದ ಕಾರಣ ಕೆರೆಯ ಸುತ್ತಲಿನ ಗ್ರಾಮಗಳ ರೈತರು ಪಟ್ಟಣದ ಮೀನುಗಾರಿಕೆ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಬ್ಯಾಡನೂರು ಕೆರೆಯಲ್ಲಿ ಮೀನು ಹಿಡಿಯಲು 2014 ರಲ್ಲಿ ಹರಾಜು ಮಾಡಲಾಗಿತ್ತು. ಆದರೆ, ಕಳೆದ 6 ವರ್ಷಗಳಿಂದ ನೀಡಿದ ಹರಾಜು ಜೂನ್ 30ಕ್ಕೆ ಮುಗಿದರೂ ಮೀನುಗಾರಿಕಾ ಇಲಾಖೆ ಮಾಧ್ಯಮ ಪ್ರಕಟಣೆ ನೀಡದೆ ಹಿಂದಿನ ಹರಾಜುದಾರರನ್ನೆ ಮುಂದುವರೆಸಿದೆ.
ಅದರೆ, ತಾಲೂಕು ಮಟ್ಟದ ಅಧಿಕಾರಿಗಳು, ಕೇಂದ್ರ ಇಲಾಖೆಯಿಂದ ಬಂದ ಆದೇಶ ಪಾಲನೆ ಮಾಡಲಾಗುತ್ತಿದೆ ಎನ್ನುತ್ತಾರೆ. ಈ ಕೂಡಲೇ ನೀಡಿದ ಪರವಾನಗಿ ರದ್ದು ಮಾಡಿ, ಹೇಳಿಕೆ ನೀಡಿ ಹೊಸ ಹರಾಜು ಪ್ರಕ್ರಿಯೆ ನಡೆಸಬೇಕೆಂದು ಮೀನುಗಾರಿಕೆ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.