ತುಮಕೂರು: ನಗರದಲ್ಲಿ ಸಿದ್ದರಾಮಯ್ಯ ಬಣ ಹಾಗೂ ಈಶ್ವರಪ್ಪ ಬಣಗಳ ನಡುವೆ ಕಿತ್ತಾಟ ನಡೆದಿದೆ. ನಾಳೆ ನಡೆಯುವ ಕುರುಬರ ಸಮಾವೇಶಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ಕಾದಾಟ ನಡೆದಿದೆ . ಸಮಾವೇಶಕ್ಕೆ ಈಶ್ವರಪ್ಪ ಅವರನ್ನು ಆಹ್ವಾನಿಸದೇ ಕೇವಲ ಸಿದ್ದರಾಮಯ್ಯ ಆಹ್ವಾನಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈಶ್ವರಪ್ಪ ಯಾವತ್ತೂ ಹಿಂದುಳಿದವರ ಪರ ಧ್ವನಿ ಎತ್ತಿಲ್ಲ. ಕೇವಲ ಸಿದ್ದರಾಮಯ್ಯ ಮಾತ್ರ ಕುರುಬರ ಪರ ನಿಲ್ಲುತ್ತಾರೆ. ಈಶ್ವರಪ್ಪ ತಾನು ಕುರುಬ ಎಂದು ಹೇಳಲಿ, ಆ ಮೇಲೆ ಅವರನ್ನು ಸಮಾವೇಶಕ್ಕೆ ಕರಿತೀವಿ ಎಂದು ಕುರುಬರ ರಾಜ್ಯ ಸಂಘದ ನಿರ್ದೇಶಕ ರಾಮಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಮಚಂದ್ರಪ್ಪರ ಹೇಳಿಕೆಯಿಂದ ಇನ್ನಷ್ಟು ಕೆರಳಿದ ಈಶ್ವರಪ್ಪ ಬಣ, ಖಾಸಗಿ ಹೋಟೆಲ್ನ ಮುಂಭಾಗ ನಡುರಸ್ತೆಯಲ್ಲಿ ಕಿತ್ತಾಟ ಮಾಡಿಕೊಂಡಿವೆ. ಜಿಲ್ಲಾ ಮಟ್ಟದ ಕುರುಬರ ಜಾಗೃತಿ ಸಮಾವೇಶ ಕಾರ್ಯಕ್ರಮ ಆಯೋಜಿಸುವುದಕ್ಕೂ ಮುನ್ನ ಸಮುದಾಯದ ಮುಖಂಡರ ನಡುವಿನ ಒಳಜಗಳ ಬೀದಿಗೆ ಬಂದಿದೆ. ಒಬ್ಬರಿಗೊಬ್ಬರು ರಂಪಾಟ ಮಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಜಿಲ್ಲಾ ಮಟ್ಟದ ಕುರುಬರ ಜಾಗೃತಿ ಸಮಾವೇಶ ಶನಿವಾರ ನಡೆಯಲಿದ್ದು, ಈ ಬಗ್ಗೆ ಮಾಹಿತಿ ನೀಡಲು ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಗದ್ದಲ ನಡೆದಿದೆ.
ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗೈರು: ಪತ್ರಿಕಾಗೋಷ್ಠಿಗೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಟಿ ಆರ್ ಸುರೇಶ್, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗೈರು ಹಾಜರಾಗಿದ್ದರು. ಪತ್ರಿಕಾಗೋಷ್ಠಿಯ ನಂತರ ಮುಖಂಡ ರಂಜನ್ ಎಂಬುವವರು ಸಮುದಾಯದ ಸ್ವಾಮೀಜಿಗಳು ಸಂಘದ ಅಧ್ಯಕ್ಷರನ್ನು ಸಮಾವೇಶಕ್ಕೆ ಆಹ್ವಾನ ನೀಡಿಲ್ಲ, ನಿಮ್ಮಿಷ್ಟದಂತೆ ಸ್ವಂತ ಕಾರ್ಯಕ್ರಮದಂತೆ ಮಾಡುತ್ತಿದ್ದೀರಿ ಎಂದು ಏರುದನಿಯಲ್ಲಿ ಕೂಗಾಡತೊಡಗಿದರು. ಈ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಮುಖಂಡರ ನಡುವೆ ವಾಗ್ವಾದ ಮೇರೆ ಮೀರಿತು.
ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ಮುಂದಾದರು. ಸ್ಥಳದಲ್ಲಿದ್ದ ಮುಖಂಡರು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು. ಮೇ8ರಂದು ತುಮಕೂರು ನಗರದಲ್ಲಿ ಜಿಲ್ಲಾ ಕುರುಬರ ಜಾಗೃತಿ ಸಮಾವೇಶ ನಡೆಯಲಿದ್ದು, ಸಮಾವೇಶಕ್ಕೆ ರಾಜ್ಯದ ನಾಯಕರನ್ನು ಆಹ್ವಾನಿಸಿಲ್ಲ. ಆದರೆ, ಸಿದ್ದರಾಮಯ್ಯ ಮಾತ್ರ ಭಾಗವಹಿಸಲಿದ್ದಾರೆ. 15ರಿಂದ 20 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಮುಖಂಡ ರಾಮಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗುವುದಾಗಿ ಯುವತಿ ಮೇಲೆ ಅತ್ಯಾಚಾರ : ಸಂತ್ರಸ್ತೆಯ ಸಂಬಂಧಿಕರಿಗೆ ಬೆತ್ತಲೆ ಫೋಟೊ ಕಳಿಸಿದ ಕೀಚಕ