ತುಮಕೂರು : ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಇದರಿಂದಾಗಿ ರಾಗಿಯ ಸಮೃದ್ಧ ಫಸಲು ರೈತರ ಕೈಸೇರಿದೆ. ಈ ಹಿನ್ನೆಲೆ 7 ಕಡೆ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ರೈತರಿಗೆ ಉತ್ತಮ ಬೆಲೆ ಮಾರುಕಟ್ಟೆಯಲ್ಲಿ ಲಭಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ನೀಡಿ ಜಿಲ್ಲೆಯ 7 ಕಡೆ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ರೈತರು ಕೂಡ ಸರ್ಕಾರದ ಬೆಂಬಲ ಬೆಲೆಯಾದ ಪ್ರತಿ ಕ್ವಿಂಟಾಲ್ ಗೆ 3925 ರೂ. ಗಳಂತೆ ಮಾರಾಟ ಮಾಡಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪ್ರತಿನಿತ್ಯ ಸುಮಾರು 2000 ಕ್ಕೂ ಹೆಚ್ಚು ಕ್ವಿಂಟಲ್ ರಾಗಿಯನ್ನು ರೈತರು ಖರೀದಿ ಕೇಂದ್ರಗಳಿಗೆ ತಂದು ಮಾರಾಟ ಮಾಡುತ್ತಿದ್ದಾರೆ.
ಈ ಬಾರಿ ಕೃಷಿ ಇಲಾಖೆ ಮಾಹಿತಿ ಪ್ರಕಾರ, ರಾಗಿ ಬಿತ್ತನೆ ಗುರಿಯನ್ನು ಮೀರಿಸಿ ಸಾಧನೆ ಮಾಡಲಾಗಿದೆ. ಅಲ್ಲದೆ ಪೂರಕವಾಗಿ ಮಳೆ ಕೂಡ ಸುರಿದ ಪರಿಣಾಮ ರಾಗಿ ಫಸಲು ಉತ್ಕೃಷ್ಟ ಗುಣಮಟ್ಟದಿಂದ ಕೂಡಿದ್ದಾಗಿದೆ. ಕಳೆದ ಹದಿನೈದು ದಿನಗಳಿಂದ ರಾಗಿ ಖರೀದಿ ಕೇಂದ್ರಗಳಲ್ಲಿ ಆಹಾರ ಮತ್ತು ಸರಬರಾಜು ಇಲಾಖೆ ಅಧಿಕಾರಿಗಳು ರೈತರಿಂದ ರಾಗಿ ಖರೀದಿಸುತ್ತಿದ್ದಾರೆ ಎಂದು ತಿಳಿಸಿದೆ.
990 ಮಂದಿ ತುಮಕೂರಿನ ಎಪಿಎಂಸಿಯಲ್ಲಿ ಸ್ಥಾಪಿಸಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದಾರೆ. ಇದುವರೆಗೂ 20,440 ಕ್ವಿಂಟಲ್ ರಾಗಿಯನ್ನು ರೈತರಿಂದ ಖರೀದಿಸಲಾಗಿದೆ.