ತುಮಕೂರು: ಶಿವಮೊಗ್ಗದ ಹುಣಸೋಡು ದುರಂತ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲೇ ತುಮಕೂರಲ್ಲಿ ಇದೇ ರೀತಿಯ ಘಟನೆಯೊಂದು ಜರುಗಿದೆ.
ತುಮಕೂರು ತಾಲೂಕಿನ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಇರುವ ಮಸ್ಕಲ್ ಗ್ರಾಮದ ಲಕ್ಷ್ಮೀಕಾಂತ ಎಂಬುವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಜಿಲಿಟಿನ್ ಕಡ್ಡಿ ಸ್ಫೋಟದಿಂದ ಮನೆ ಸಂಪೂರ್ಣ ಧ್ವಂಸಗೊಂಡಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಲಕ್ಷ್ಮೀಕಾಂತ ಅವರ ಪತ್ನಿ ಸುವರ್ಣಮ್ಮಗೆ ಸ್ವಲ್ಪ ಪ್ರಮಾಣದ ಗಾಯವಾಗಿರುವುದನ್ನು ಬಿಟ್ಟರೆ ಪ್ರಾಣಹಾನಿ ಸಂಭವಿಸಿಲ್ಲ.
ನಿನ್ನೆ ಮಧ್ಯಾಹ 12 ಗಂಟೆ ಸಂದರ್ಭದಲ್ಲಿ ಈ ಘಟನೆ ಜರುಗಿದೆ. ಲಕ್ಷ್ಮೀಕಾಂತ ಕಲ್ಲು ಬಂಡೆಗಳನ್ನು ಸ್ಫೋಟಿಸುವ ಕೆಲಸ ಮಾಡುತ್ತಿದ್ದ. ಎಂದಿನಂತೆ ಮಸ್ಕಲ್ ಸಮೀಪದ ಶಾಲೆಯೊಂದರಲ್ಲಿ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಜಿಲಿಟಿನ್ ಕಡ್ಡಿ ಬಳಕೆ ಮಾಡಿದ್ದ. ಕಡ್ಡಿಗಳು ಹೆಚ್ಚಿದ್ದರಿಂದ ಅವುಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋನ ವಂಶಿ ಕೃಷ್ಣ, ಡಿವೈಎಸ್ಪಿ ಶ್ರೀನಿವಾಸ್, ಕ್ಯಾತ್ಸಂದ್ರ ವೃತ್ತ ನಿರೀಕ್ಷಕ ಚನ್ನೇಗೌಡ, ದೌಡಾಯಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಲಕ್ಷ್ಮೀಕಾಂತ ತಲೆ ಮರೆಸಿಕೊಂಡಿದ್ದಾನೆ.