ತುಮಕೂರು : ಈ ಬಾರಿಯ ರಾಜ್ಯ ಬಜೆಟ್ ಮೇಲೆ ಕಲ್ಪತರು ನಾಡು ತುಮಕೂರು ಜಿಲ್ಲೆಯ ಜನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಮುಖ್ಯವಾಗಿ ನೀರಾವರಿ, ಶಿಕ್ಷಣ, ಕೈಗಾರಿಕೆ, ರೈಲ್ವೆ ಯೋಜನೆಗಳಿಗೆ ಬಜೆಟ್ನಲ್ಲಿ ಪ್ರಾಧಾನ್ಯತೆ ದೊರೆಯಲಿದೆ ಎಂಬ ಆಶಾಭಾವನೆ ಹೊಂದಿದ್ದಾರೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ತೆಂಗು ಬೆಳೆ ಅಭಿವೃದ್ಧಿಗೆ ಪೂರಕವಾದ ತೆಂಗು ಪಾರ್ಕ್ ಬಗ್ಗೆ ಈ ಬಜೆಟ್ನಲ್ಲಿ ಗಂಭೀರವಾಗಿ ಪರಿಗಣಿಸುವ ನಿರೀಕ್ಷೆಯನ್ನು ಜಿಲ್ಲೆಯ ತೆಂಗು ಬೆಳೆಗಾರರು ಹೊಂದಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಶೇ. 50ರಷ್ಟು ರಾಜ್ಯ ಸರ್ಕಾರದ ಅನುದಾನದಲ್ಲಿ ರೈಲ್ವೆ ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ, ಅವುಗಳು ಕುಂಟುತ್ತ ಸಾಗಿರುವುದು ಗಮನಾರ್ಹ ಅಂಶವಾಗಿದೆ. ತುಮಕೂರು-ರಾಯದುರ್ಗ, ತುಮಕೂರ- ದಾವಣಗೆರೆ ರೈಲು ಮಾರ್ಗದ ಭೂಸ್ವಾಧೀನ ಹಾಗೂ ಕಾಮಗಾರಿ ಮುಂದುವರಿಸಲು ಅನುದಾನದ ಕೊರತೆ ಎದುರಾಗಿದ್ದು, ಈ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆಯಿದೆ. ರಾಯದುರ್ಗ ಮಾರ್ಗದಿಂದ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲಿದ್ದು, ಕೃಷಿ ತೋಟಗಾರಿಕೆ ಉತ್ಪನ್ನಗಳ ಸರಕು ಸಾಗಾಣಿಕೆಗೆ ಇದು ಉಪಯೋಗವಾಗಲಿದೆ. ದಾವಣಗೆರೆ-ತುಮಕೂರು ಮಾರ್ಗ ಪೂರ್ಣಗೊಂಡರೆ, ಮಧ್ಯ ಕರ್ನಾಟಕ ಮೂಲಕ ಉತ್ತರ ಕರ್ನಾಟಕಕ್ಕೆ ಸಂಪರ್ಕಕ್ಕೆ ಸಹಕಾರಿಯಾಗಲಿದ್ದು, 2 ಗಂಟೆಗಳ ಪ್ರಯಾಣ ಕಡಿಮೆಯಾಗಲಿದೆ.
ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿದ್ದು, ಕಾಮಗಾರಿ ಮುಂದುವರಿಸಲು ಅನುದಾನದ ಕೊರತೆ ಎದುರಾಗಿದೆ. ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ಕೂಡ ಪೂರ್ಣಗೊಂಡಿಲ್ಲ. ಕೊರೊನಾ ಸೋಂಕು ಹರಡುವಿಕೆ ಭೀತಿ ಸಂದರ್ಭದಲ್ಲಿ ಬಹುತೇಕ ಎತ್ತಿನಹೊಳೆ ಕಾಮಗಾರಿ ಸ್ಥಗಿತಗೊಂಡಿತ್ತು. ತುಮಕೂರು ಜಿಲ್ಲೆಯಲ್ಲಿ 218 ಗ್ರಾಮಗಳಲ್ಲಿ 5,903 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಕೊರಟಗೆರೆ ತಾಲೂಕಿನ ಬೈರಗೊಂಡ್ಲುವಿನಲ್ಲಿ ಭಫರ್ ಡ್ಯಾಮ್ ನಿರ್ಮಾಣಕ್ಕೆ 2,000 ಎಕರೆ ಜಮೀನು ಸ್ವಾಧೀನ ಮಾಡಬೇಕಿದೆ. ಭೂಸ್ವಾಧೀನಕ್ಕೆ 2,400 ಕೋಟಿ ರೂ. ಅಗತ್ಯವಿದೆ. ಆದರೆ ಈವರೆಗೆ ಕೇವಲ 120 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಕೊರಟಗೆರೆ, ಮಧುಗಿರಿ, ಪಾವಗಡದಲ್ಲಿ ಭೂಸ್ವಾದಿನವೇ ಆರಂಭವಾಗಿಲ್ಲ. ಬಜೆಟ್ನಲ್ಲಿಯಾದರೂ ವಿಶೇಷವಾಗಿ ಆದ್ಯತೆ ನೀಡುವ ನಿರೀಕ್ಷೆ ಹೊಂದಲಾಗಿದೆ.
ಜಿಲ್ಲೆಯ ಜೀವನದಿ ಎಂದೇ ಪರಿಗಣಿಸಲ್ಪಟ್ಟಿರುವ ಹೇಮಾವತಿ ನದಿ ನೀರಿನ ಸಮರ್ಪಕ ಬಳಕೆಗೆ ಪೂರಕವಾಗಿ ಅಗತ್ಯವಿರುವ ಹೇಮಾವತಿ ನಾಲೆ ನಿರ್ಮಿಸಿ ಅನೇಕ ದಶಕಗಳೇ ಕಳೆದು ಹೋಗಿದೆ. ಕೆಲವೆಡೆ ನೀರು ಸರಾಗವಾಗಿ ಸಾಗದೆ ತೊಡಕುಂಟಾಗುತ್ತಿದೆ. ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿಗೆ 550 ಕೋಟಿ ರೂ. ಬೇಕಾಗಿದೆ. ನಾಲೆಗಳ ಆಧುನೀಕರಣ ಅನುದಾನದ ಬೇಡಿಕೆ ಈಗಾಗಲೇ ಸಲ್ಲಿಸಲಾಗಿದ್ದು, ಸರ್ಕಾರ ಬಜೆಟ್ನಲ್ಲಿ ಇದಕ್ಕೆ ಹೆಚ್ಚಿನ ಹಣವನ್ನು ನೀಡಬೇಕಿದೆ.
ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸುವ ಕೆಲಸವನ್ನು ಕೈಗೊಂಡಿದ್ದು, ಅನುದಾನ ಒದಗಿಸಲಾಗಿದೆ. ದಶಕದಿಂದ ತುಮಕೂರು ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಹಾಗೂ ಆರಂಭಿಸಬೇಕೆಂಬ ಜಿಲ್ಲೆಯ ಜನರ ಬೇಡಿಕೆ ಹಾಗೆ ಉಳಿದು ಹೋಗಿದೆ. ಈ ಬಾರಿಯ ಬಜೆಟ್ನಲ್ಲಾದರೂ, ಇದಕ್ಕೆ ಚಾಲನೆ ಸಿಗಲಿದೆಯೇ ಎಂಬ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ.
ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಸಂಬಂಧಪಟ್ಟಂತೆ ತುಮಕೂರಿನ ಹೊರವಲಯದಲ್ಲಿರುವ ವಸಂತನಾರಸಪುರ ಕೈಗಾರಿಕಾಭಿವೃದ್ಧಿ ಪ್ರದೇಶಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳಲ್ಲಿ ಒಂದಾಗಿರುವ ನೀರಿನ ಕೊರತೆ ಎದುರಾಗಿದ್ದು, ಇದನ್ನು ಸರಿಪಡಿಸಲು ಇದುವರೆಗೂ ಸಾಧ್ಯವಾಗಿಲ್ಲ. ಈ ಬಾರಿಯ ಬಜೆಟ್ನಲ್ಲಾದರೂ ಕೈಗಾರಿಕಾ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಸ್ತಾಪವಾಗಲಿದೆಯೇ ಎಂಬ ನಿರೀಕ್ಷೆ ಜಿಲ್ಲೆಯ ಜನರಿಗಿದೆ. ಒಟ್ಟಾರೆ ತುಮಕೂರು ಜಿಲ್ಲೆಯ ಜನರ ನಿರೀಕ್ಷೆಗಳು ಈ ಬಾರಿಯ ಬಜೆಟ್ನಲ್ಲಿ ಎಷ್ಟರಮಟ್ಟಿಗೆ ಪ್ರಸ್ತಾಪವಾಗಲಿದೆ ಎಂಬುವುದು ಕಾದು ನೋಡಬೇಕಿದೆ.