ತುಮಕೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಯಾರಾದ್ರೂ ಕೆಲ್ಸ ಮಾಡಿದ್ದು ಗೊತ್ತಾದ್ರೇ ನಾನು ಸುಮ್ಮನೆ ಇರೋಲ್ಲ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ತಾಲೂಕಿನ ನಾಗವಲ್ಲಿ ಗ್ರಾಮದಲ್ಲಿ ಇಂದು ನಡೆದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕವಾಗಿ ರಾಹುಲ್ ಗಾಂಧಿಗೆ ಗೌರವ ಕೊಟ್ಟು ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಗೆಲ್ಲಿಸಬೇಕು. ದೇವೇಗೌಡರು ಗೆಲ್ಲಿಸೋದು ನಮ್ಮ ಮೇಲಿರುವ ಜವಾಬ್ದಾರಿ. ಅದನ್ನ ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದರು.
ಇಷ್ಟು ದಿನ ಹಸ್ತಕ್ಕೆ ಮತ ಹಾಕಿ ಎಂದು ಕೇಳುತ್ತಿದ್ದೆವು. ಆದರೆ, ಈಗ ದಳದ ಚಿಹ್ನೆಗೆ ಹೆಂಗಣ್ಣಾ ಮತ ಹಾಕೋದು ಎಂದು ಕೆಲ ಮುಖಂಡರು ನನ್ನನ್ನು ಕೇಳುತ್ತಿದ್ದಾರೆ. ನಾನು ಅದಕ್ಕೊಂದು ಉಪಾಯ ಹೇಳಿದ್ದೇನೆ. ಅದನ್ನ ಪಕ್ಕಕ್ಕಿಟ್ಟು ದೇವೇಗೌಡರ ಮುಖ ನೋಡಿ ಇದೊಂದು ಭಾರಿ ಬಟನ್ ಒತ್ತಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಇದು ದೇಶದ ಭವಿಷ್ಯದ ಪ್ರಶ್ನೆಯಾಗಿದೆ. ಯಾರೂ ಬೇಜಾರು ಮಾಡಿಕೊಳ್ಳದೇ ಈ ಕೆಲಸವನ್ನು ಮಾಡಿಕೊಡಿ ಎಂದು ಬೇಡಿಕೊಂಡರು. ಸಭೆಯಲ್ಲಿ ಸಚಿವ ಎಸ್. ಆರ್. ಶ್ರೀನಿವಾಸ್, ಜೆಡಿಎಸ್ ಶಾಸಕ ಗೌರಿಶಂಕರ್, ಕಾಂಗ್ರೆಸ್ನ ಮಾಜಿ ಶಾಸಕ ಶಫೀ ಅಹ್ಮದ್, ಜೆಡಿಎಸ್ನ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಮಾಜಿ ಸದಸ್ಯ ರಮೇಶ್ ಬಾಬು ಮತ್ತಿತರರು ಹಾಜರಿದ್ದರು.