ತುಮಕೂರು: ಕೋವಿಡ್ ಹಿನ್ನೆಲೆ ಆನ್ಲೈನ್ ತರಗತಿಗಳ ಮೊರೆ ಹೋಗಿದ್ದ ಶಾಲೆಗಳೀಗ ಭೌತಿಕ ತರಗತಿಗಳನ್ನು ಆರಂಭಿಸಿವೆ. ಆದರೆ ಹಲವೆಡೆ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳನ್ನು ಆಕರ್ಷಿಸುವ ಸಲುವಾಗಿ ತುಮಕೂರಿನ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿದ್ಯುತ್ ಚಾಲಿತ ರೈಲನ್ನು ತರಿಸಲಾಗಿದೆ.
ಕೊರೊನಾ ನಂತರ ವಿದ್ಯಾರ್ಥಿಗಳು ಅದರಲ್ಲೂ ಪ್ರೀ ನರ್ಸರಿ ಹಾಗೂ 1 ಮತ್ತು 2ನೇ ತರಗತಿಯ ಮಕ್ಕಳು ನಿತ್ಯ ಶಾಲೆಗೆ ಬರಲು ಹಠ ಮಾಡುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಪೋಷಕರು ಸ್ವಂತ ವಾಹನದಲ್ಲಿ ಸಂಚರಿಸಿದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸಾರಿಗೆ ವಿಷಯವೇ ಮರೆತು ಹೋದಂತಾಗಿತ್ತು. ಈ ಹಿನ್ನೆಲೆ ಸುಮಾರು 8.5 ಲಕ್ಷ ರೂ. ವೆಚ್ಚದ ಈ ವಿದ್ಯುತ್ ಚಾಲಿತ ರೈಲು ತರಿಸಲಾಗಿದೆ.
ಈ ರೈಲಿನಲ್ಲಿ 3 ಬೋಗಿಗಳಿದ್ದು, ಒಂದು ಬೋಗಿಯಲ್ಲಿ 8-10 ವಿದ್ಯಾರ್ಥಿಗಳು ಕುಳಿತು ಚಲಿಸಬಹುದು. ಪ್ರತಿ ಬೋಗಿಯಲ್ಲಿಯೂ ಧ್ವನಿವರ್ಧಕ ಮತ್ತು ಮೈಕ್ ಇದ್ದು, ಅದರಲ್ಲಿ ವಿದ್ಯಾರ್ಥಿಗಳಿಗೆ ರೈಮ್ಸ್, ಕಥೆಗಳನ್ನು ಕೇಳಿಸಬಹುದು. ಇದೇ ವಾಹನದಲ್ಲಿ ಈಗ ಶಾಲೆಯ ಮುಖ್ಯ ಗೇಟ್‌ನಿಂದ ಶಾಲಾ ಕೊಠಡಿಯವರೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತಿದ್ದು, ಮಕ್ಕಳು ಸಂತೋಷದಿದ ಶಾಲೆಗೆ ಬರುತ್ತಿದ್ದಾರೆ ಎಂದು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ಕೇಶವ್ ಮಾಹಿತಿ ನೀಡಿದ್ದಾರೆ. ಈ ರೀತಿ ವಿದ್ಯುತ್ ಚಾಲಿತ ರೈಲನ್ನು ಹೊಂದಿರುವ ಶಾಲೆ ಪಟ್ಟಿಯಲ್ಲಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆ 2ನೇ ಶಾಲೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸರ್ಕಾರದಿಂದ ಪಠ್ಯಕ್ರಮ ಬದಲು ಆದೇಶ: ಟೀಕೆಗಳ ಸುರಿಮಳೆ, ಆಕ್ರೋಶ